Thursday, October 29, 2009

ಇಲಿಗಳು ಸಾರ್ ಇಲಿಗಳು..

ನೆನ್ನೆ ಬನವಾಸಿ ಐಟಿ ಕನ್ನಡ ಬಳಗದ ಮಾಡರೇಟರ್ ಒಂದು ಮಿಂಚೆ ಹಾಕಿದ್ರು.. ಸಾಮಾನ್ಯವಾಗಿ ಆ ರೀತಿ ಮೈಲ್ ನೊಡಿಲ್ಲ ನಾನು ಇದುವರ್ಗು. ಅವರು ಕೇಳಿಕೊಂಡಿದ್ದೇನು ಅಂದ್ರೆ "ಗುಂಪಿನಲ್ಲಿ ಇರೊವ್ರು ದಯವಿಟ್ಟು ತಮ್ಮ ಕನ್ನಡೇತರ ಸ್ನೇಹಿತರಿಗೆ ಕೆಲಸ ಖಾಲಿ ಇರುವ ಮಾಹಿತಿ ಈ ಗುಂಪಿನಿಂದ ಪಡೆದು ಅವರೊಂದಿಗೆ ಹಂಚಿಕೊಳ್ಳಬೇಡಿ"ಅಂತ. ಹಿಂಗು ಕೇಳ್ಕೊಳ್ಳೊ ಪರಿಸ್ಥಿತಿ ಬಂದಿರೋದು ಕನ್ನಡಿಗರ ದುರ್ಗತಿ. ಮೊದಲನೇಯದಾಗಿ ಆ ರೀತಿ ಮಿಂಚೆ ಹಾಕಲು ಕಾರಣವೇನು ಅಂತ ಯೋಚಿಸಿದಾಗ ಆಲೊಚನೆ ಬರೋದು, ಗುಂಪಿನಲ್ಲಿ ಕೆಲಸ ಖಾಲಿ ಇರೊದರ ಬಗ್ಗೆ ಮಾಹಿತಿ ಹಾಕೊದು ಕನ್ನಡಿಗರು, ಅವಕಾಶ ವಂಚಿತ ಕನ್ನಡಿಗರಿಗೆ ಕೆಲಸ ಸಿಗಲು ಸಹಾಯಕವಾಗಲಿ ಅಂತ ಅಥವಾ ಮೊದಲನೆ ಮೆಟ್ಟಿಲು ಹತ್ತುವುದಕ್ಕೆ ಸಹಾಯಕವಾಗಲಿ ಎಂದು. ಆಗ ತಾನೆ ಪಾಸಾಗಿ ಏನೂ ಅರಿಯದೆ ಪಿಳಿ ಪಿಳಿ ಎಂದು ಕೆಲಸದ ಮಾರುಕಟ್ಟೆಯಲ್ಲಿ ಕಾಲಿಡುವ ಫ್ರೆಷರ್‌ಗೆ ದಾರಿತೋರಿಸಲು,ಇದು ಗುಂಪಿನ ಸದಸ್ಯರ ಮನೋಭಾವ ತೋರಿಸುತ್ತೆ. ಆದರೆ ಮಾಡರೇಟರ್ ಇಂದ ಈ ರೀತಿ ಮಿಂಚೆ ಬರಲು ಕಾರಣವೇನು? ಉತ್ತರ ಹುಡುಕಿದರೆ ಇದಕ್ಕೆ ಕಾರಣ ವಿಶಾಲ ಹೃದಯಿ ಕನ್ನಡಿಗರ ಪ್ರವೃತ್ತಿಯ ಕೆಲಸವಾಗಿರುತ್ತದೆ.ಒಂದು ಕಛೇರಿ ಅಂದ ಮೇಲೆ ಕನ್ನಡೇತರರು ಇರುವುದು ಸಹಜ ಹಾಗಾಗಿ ಅವರೊಂದಿಗೆ ಗೆಳೆತನ ಸಲುಗೆಯಾಗುವುದು ಅಷ್ಟೆ ಸಹಜ.ಈ ರೀತಿ ಸಂಬಂಧ ಬೆಳೆದ ಮೇಲೆ ಆ ಕನ್ನಡೆತರ ಗೆಳೆಯರಿಗೆ ಅಥವ ಅವರ ಆಪ್ತರಿಗೆ ಕೆಲಸದ ತೊಂದರೆಯಾದಾಗ ಈ ವಿಶಾಲ ಹೃದಯಿಗಳು ಕಣಕ್ಕಿಳಿಯುತ್ತಾರೆ ತಮ್ಮ ಶಕ್ತಿಮೀರಿ ಸಹಾಯ ಮಾಡಲು ಸಿದ್ಧರಾಗುತ್ತಾರೆ - ಒಳ್ಳೆಯವರೆನಿಸಿಕೊಳ್ಳಬೇಕಲ್ಲವೆ? ಮಾನವೀಯತೆಯ ಪ್ರಶ್ನೆಯಲ್ಲವೆ? ೦ಶ್ರೇಷ್ಠರೆನಿಸಿಕೊಳ್ಳುವುದು ಯಾವಾಗ? ಹಾಗಾಗಿ ಇಂಥವರು ಮಾಹಿತಿ ಕಲೆ ಹಾಕಲು "ಕನ್ನಡಿಗರಿಗೆ ಮಾತ್ರ" ಅನ್ನುವ ಗುಂಪುಗಳ ಸದಸ್ಯರಾಗಿ ಗುಂಪಿನಲಿ ಒಂದಾಗುತ್ತಾರೆ. ಕನ್ನಡಿಗರ ಭದ್ರ ಕೋಟೆಯಲ್ಲಿ ಬಿಲ ಕೊರೆದು, ಮಾಹಿತಿಯನ್ನು ಕನ್ನಡೇತರರಿಗೆ ಹಂಚುತ್ತಾರೆ ತಮ್ಮ ಬೆನ್ನನ್ನು ತಾವೆ ತಟ್ಟಿಕೊಳ್ಳುತ್ತಾರೆ, ಮಾನವೀಯತೆ ಮೆರೆದರಲ್ಲವೆ!! ಆತ್ಮ ಸಂತೃಪ್ತಿ ಮುಖ್ಯವಲ್ಲವೆ?

ಪ್ರಶ್ನೆ ಬರುವುದು ಕನ್ನಡಿಗರಿಗೆ ಭದ್ರ ಕೋಟೆಯ ಅವಶ್ಯಕತೆಯಿದೆಯೆ?ಅಂತ. ಇಂದು ಬೆಂಗಳೂರಿನಲ್ಲಿ ಯಾವ ಕಂಪನಿಗೆ ಹೋದರು ಕನ್ನಡಿಗ ಅಲ್ಪಸಂಖ್ಯಾತ!! ಎಂತಹ ವಿಪರ್ಯಾಸ ಅಲ್ಲವೆ? ನಮ್ಮ ನಾಡಿನಲ್ಲಿ ಎಷ್ಟು ಕಾಲೇಜು ಇವೆ, ಪ್ರತಿ ವರ್ಷ ಎಷ್ಟು ಜನ ತೇರ್ಗಡೆಯಾಗಿ ಹೊರಬರುತ್ತಾರೆ.. ಅವರಿಗೆಲ್ಲ ಕೆಲಸ ಹೇಗೆ ಸಿಗಬೇಕು? ಕಾರ್ಖಾನೆಗಳ ಸಂಖ್ಯೆಯಂತು ಹೆಚ್ಚಾದರೂ ಸಹಿತ ತೇರ್ಗಡೆಯಾಗುವವರಿಗೆ ಕೆಲಸ ಸಿಗುವ ಸಂಖ್ಯೆ ನಗಣ್ಯವಾಗಿರುತ್ತದೆ. ನಮ್ಮವರಿಗೆ ನಮ್ಮ ನೆಲದಲ್ಲೆ ಪೈಪೋಟಿ ಇರಬೇಕಾದ ಪರಿಸ್ಥಿತಿಯಲ್ಲಿ ಹೊರಗಿನಿಂದ ಬಂದು ದಬ್ಬಾಳಿಕೆ ಮಾಡಿ ಕನ್ನಡಿಗರಿಗೆ ಸಿಗಬಹುದಾದ ಅವಕಾಶವನ್ನು ರಾಜಕಾರಣ ಮಾಡಿ ಇಲ್ಲವೆ ಅಧಿಕಾರ ಚಲಾಯಿಸಿ ಕನ್ನಡೇತರರಾದ ತಮ್ಮವರಿಗೆ ಕೊಡಿಸಿದರೆ ಕನ್ನಡಿಗನ ಬಾಯಿಗೆ ಮಣ್ಣು ಬೀಳದೆ ಬೇರೇನು ಸಿಕ್ಕೀತು? ಹಾಗಾಗಿ ನಮಗೆ,ನಮ್ಮವರಿಗೆ ಭದ್ರ ಕೋಟೆಯ ಅವಶ್ಯಕತೆ ಇದೆ. ಹೀಗಿರುವಾಗ ಇಲಿಗಳನ್ನು ಬಿಟ್ಟುಕೊಂಡು ಬಿಲವನ್ನು ಕೊರೆಸಿಕೊಂಡಾಗ ರಕ್ತ ಕುದಿಯದೆ ಬೇರೇನಾದೀತು?
ಮತ್ತೊಂದು ಪ್ರಶ್ನೆಯೆಂದರೆ ಐಟಿ ಎಂದರೆ ಪ್ರತಿಷ್ಟೆಯೆ? ನಾನು ಐಟಿ ಕನ್ನಡಿಗ ಅಂತ ಹೇಳಿಕೊಂಡು ಎಲ್ಲರೊಂದಿಗೆ ಪೈಪೋಟಿ ನಡೆಸುತ್ತೇನೆ ಎಂದರೆ ಕರ್ನಾಟಕ ಬಿಟ್ಟು ಹೋಗಿ ಅಲ್ಲಿ ಪೈಪೊಟಿ ನಡೆಸಿದರೆ ಗೊತ್ತಾಗುವುದು ನಮ್ಮ ನಾಡಿನ ಬೆಲೆ. ಎಷ್ಟೆ talent ಸಹ ಇದ್ರು ಕೊನೆಗೆ ಅವರು ಅವರ ಅಭ್ಯರ್ಥಿಗಳನ್ನು ಬಿಟ್ಟುಕೊಡುವುದಿಲ್ಲ, ಅವರಿಗೆ ಕೆಲಸದ ಅರ್ಹತೆ ಇರಲಿ ಬಿಡಲಿ ಒಳಗೆ ಬಿಟ್ಟುಕೊಳ್ಳುವುದು ಖಂಡಿತ. ತಲೆ ಒಡೆದರೆ ಒಂದಶದ ಜ್ಞಾನವಿರುವುದಿಲ್ಲ, ಬಾಯ್ ಬಿಟ್ಟರೆ ಆಂಗ್ಲ ಮಾತಾಡಲು ಬರುವುದಿಲ್ಲ ಆದ್ರು ಸಹ ನಿಮ್ಮ ಪಕ್ಕದಲ್ಲೆ ಹಲ್ಲು ಕಿರಿಯುತ್ತಾ ಕೂತಿರುತ್ತಾನೆ. ಒಂದು ಟೀಮ್ ಅಂದ ಮೇಲೆ ಅಂಥವರನ್ನು ಸಹ ನೀವೆ ಬೆಳೆಸಬೇಕು.. ಅಂಥವರನ್ನು ಕಂಡರೆ ನಿಮಗೆ ಆಶ್ಚರ್ಯ ಆಗದೆ ಇರುವುದಿಲ್ಲ, ನಾನು ಎಷ್ಟೆಲ್ಲ ಕಷ್ಟಪಟ್ಟು ಬಂದೆ ಇವನು ಹೇಗೆ ಒಳಗೆ ಬಂದ ಅಂತ!!
ಕನ್ನಡಿಗನ ಪರಿಸ್ಥಿತಿ ಇಷ್ಟೆಲ್ಲ ಹೀನಾಯವಾಗಿರುವಾಗ ಕೆಲಸದ ಮಾಹಿತಿ ಸಿಕ್ರೆ ಮರುಭೂಮಿಯಲ್ಲಿ ನೀರು ಕಂಡ ಹಾಗೆ, ಅದನ್ನ ಕನ್ನಡಿಗರೊಂದಿಗೆ ಹಂಚಿಕೊಳ್ಳುವುದು ಬಿಟ್ಟು ಪುಕ್ಸಟ್ಟೆ ಸಿಕ್ತು ನಂದೇನು ಹೋಗ್ಬೇಕು ಅಂತ ಕನ್ನಡೇತರರಿಗು ಅರ್ಥವಾಗೊ ಹಾಗೆ ಆಂಗ್ಲದಲ್ಲಿ ತರ್ಜುಮೆ ಮಾಡಿ ಜಗಜ್ಜಾಹೀರು ಮಾಡಿದರೆ ಕನ್ನಡಿಗನಿಗೆ ಕುಡಿಯುವ ನೀರಲ್ಲ ಚರಂಡಿ ನೀರು ಸಹ ಸಿಗಲ್ಲ. ಕೊನೆಗೆ ಕನ್ನಡಿಗ ಹತಾಷನಾಗಿ ಕೈ ಚೆಲ್ಲಿ ಕೂತಿರೊವಾಗ ಕನ್ನಡೇತರ ೧೫-೨೦೦೦೦ ಸಂಬಳ ತೊಗೊಂದು ನಮ್ಮ ನಾಡಿನಲ್ಲಿ ದರ್ಬಾರು ನಡೆಸುತ್ತಾನೆ. ನಮ್ಮವರು ನಮ್ಮ ಮುಂದೆ ಅವಕಾಶ ವಂಚಿತರಾಗೊದು ನೋಡಿದ್ರೆ ಬೇಜಾರು ಆಗ್ದೆ ಬೇರೇನು ಆಗ್ಬೇಕು?
ಬಳಗದ ಮಾಡರೇಟರ್ ಮತ್ತೊಂದು ಮಾತು ಕೂಡ ಹೇಳಿದ್ದರು "ಈ ರೀತಿ ಮಾಹಿತಿಯನ್ನು ಕನ್ನಡೆತರರಿಗೆ ತಿಳಿಸುವುದು ನಿಮಗೆ ಗೊತ್ತಾದಲ್ಲಿ ನಮಗೆ ತಿಳಿಸಿ" ಅಂತ. ನಾನು ಮರುತ್ತರ ನೀಡೊಕ್ಕೆ ಹೋಗಿಲ್ಲ ಯಾಕಂದ್ರೆ ಮೊನ್ನೆವರ್ಗು ನನ್ನ ಗುಂಪಿಂದ ಬಹಿಷ್ಕಾರ ಮಾಡಿದ್ರು (ಯಾಕೆ ಹಾಗೆ ಮಾಡಿದ್ರು ಅಂತ ಅವರು ಹೇಳಿರ್ಲಿಲ್ಲ ಕೇಳೊಕ್ಕೆ ನಂಗು ಆಗ್ಲಿಲ್ಲ) ಕೊನೆಗೆ ಹೆಂಗೊ ಡೀಲ್ ಮಾಡ್ಸಿ ಮತ್ತೆ ಒಳಗೆ ಸೇರ್ಕೊಂಡೆ :). ಅಪ್ಪಿ ತಪ್ಪಿ ಇದನ್ನ ಓದಿದವರು ಆ ಗುಂಪಿನಲ್ಲಿ ಇದರ ಬಗ್ಗೆ ತಿಳಿಸಿದರೆ ನಂಗೇನು ಅಭ್ಯಂತರ ಇಲ್ಲ. ನನಗೆ ತಿಳಿದಂತೆ..ಪ್ರತಿ ಗುಂಪಿನಲು ಇಲಿಗಳು ಇದ್ದೆ ಇವೆ, ಅವುಗಳ agenda ಅವಕ್ಕೆ ಪ್ರೀತಿ ಆಗ್ಬೇಕು ಮೇಲೆ ತಿಳಿಸಿರುವ ಎಲ್ಲ ಕಾರಣಗಳನ್ನ ಗಿಣಿಗೆ ಹೇಳಿದ ಹಾಗೆ ಹೇಳಿದರು ತಲೆ ಒಳಗೆ ಒಂದಂಶ ಬಿಟ್ಟುಕೊಡುವುದಿಲ್ಲ ತಮ್ಮ ಸಮಾಜ ಸೇವೆಯೆ ಅವರಿಗೆ ಮುಖ್ಯವಾಗಿರುತ್ತದೆ . ನನಗು ಹಾಗು www.itkannadigas.com ತಾಣದ ಮಂಜುನಾಥ್ ಅವರಿಗು ದೊಡ್ಡ ಚರ್ಚೆಯೆ ಆಯಿತು ಆದರೂ ಸಹ ಅವರ ಮಾನವೀಯತೆ,ಹೃದಯ ವೈಶಾಲ್ಯತೆ ಮುಂದೆ ನನ್ನ ಸಂಕುಚಿತ(ಕನ್ನಡಿಗರಿಗೆ ಮಾತ್ರ ಸಹಾಯಕವಾಗಲೆಂಬ ಆಸೆ) ಮನೊಭಾವ ಮಣಿಯಬೇಕಾಯಿತು. ಆ ಸೈಟ್ನಲ್ಲಿರುವ testimonials ಓದಿದ್ರೆ ಕನ್ನಡೇತರರು ಯಾವ ಗುಂಪನ್ನು ಸಹ ಸೇರದೆ ಗುಂಪುಗಳಲ್ಲಿ ಹರಿದಾಡುವ ಕೆಲಸ ಖಾಲಿಯಿರುವ ಮಾಹಿತಿಯ ಸಾರವನ್ನು ಎಳ್ಳಷ್ಟು ಕಷ್ಟವಿಲ್ಲದೆ ಹೇಗೆ ಹೀರುತ್ತಾರೆ ಎಂಬುದನ್ನು ನೋಡಬಹುದು. www.kannadamitra.com ಸೈಟ್ ನೋಡಿ, ಎರಡು ತಾಣಗಳನ್ನು ತುಲನೆ ಮಾಡಿ ನಂತರ ಯೋಚಿಸಿ ಕನ್ನಡೇತರರನ್ನು ದೂರವಿಟ್ಟು ಕನ್ನಡಿಗನಿಗೆ ಕೆಲಸ ಕೊಡಿಸುವುದರಲ್ಲಿ ಯಾವುದು guarantee ಕೊಡುತ್ತದೆ ಅಂತ.
ಹಲವಾರು ಗುಂಪಿನ ಮಾಡರೇಟರ್‌ಗಳು ತಮ್ಮ ಗುಂಪಿನ ಜನ ಸಂದಣಿ ಹೆಚ್ಚಿಸಲು ನೋಡುತ್ತಾರೆಯೆ ಹೊರತು ಕನ್ನಡಿಗನಿಗೆ ಸಹಾಯವಾಗುವುದನ್ನು ಮೂಲೆಗುಂಪು ಮಾಡಿರುತ್ತಾರೆ. ಎಷ್ಟು ಯಹೂ,ಗೂಗಲ್ ಗುಂಪುಗಳು, ಎಷ್ಟು ಸದಸ್ಯರು, ಎಷ್ಟೆಲ್ಲಾ ಮಾಹಿತಿ ಇರುತ್ತದೆ ಆದರೆ "ಕನ್ನಡಿಗರಿಗೆ ಮಾತ್ರ" ಎಂಬುದು ಸಂಪೂರ್ಣವಾಗಿ ಯಶಸ್ವಿ ಆಗೊದೆ ಇಲ್ಲ ಎನ್ನುವುದು ವಿಪರ್ಯಾಸ. ನಾವು ಕನ್ನಡಿಗರಾಗಿ ಕನ್ನಡತನವನ್ನು ಉಳಿಸಿ ಬೆಳೆಸಬೇಕಾಗಿರುವುದು ಅತ್ಯಾವಶ್ಯಕವಾಗಿದೆ, ಕನ್ನಡದವರಿಗೆ ಕನ್ನಡಿಗರಾದ ನಾವೆ ಸಹಾಯ ಮಾಡಬೇಕು, ಬೇರೆಯವರು ಸಹಾಯಕ್ಕೆ ಬರಲು ಸಾಧ್ಯವೆ ಇಲ್ಲ ಯಾಕೆಂದರೆ ಅವರಿಗೆ ಅವರ ಜನರ ಮುಖ್ಯವಾಗಿರುತ್ತಾರೆ.
ನನ್ನ ಪರಿಚಯಸ್ತರೊಬ್ಬರು ಕೆಲಸ ಶುರು ಮಾಡಿದಾಗಲಿನಿಂದ ಹೆಚ್ಚಾಗಿ ಕರ್ನಾಟಕದ ಹೊರಗೆ ಇದ್ದಾರೆ,ಕನ್ನಡಾಭಿಮಾನಿಯು ಹೌದು ಒಂದೆರಡು ಕನ್ನಡದವರ ಸಂಬಂಧಿತ ಹಾಗು ಕೆಲಸದ(ಹರಿದು ಬರುವ ಮಾಹಿತಿ ಎಲ್ಲಿಂದ ಅಂತ ಕೇಳಬೇಡಿ) ಗುಂಪನ್ನು ಸಹ ನಡೆಸುತ್ತಾರೆ. ಒಮ್ಮೆ ಅವರಿಂದ ನನಗೆ ಒಂದು ಕನ್ನಡೇತರರ ರೆಸ್ಯುಮೆ ಬಂತು ನಾನು ಹೌಹಾರಿದೆ, ಕೇಳಿದೆ ಯಾಕೆ ಹೀಗೆ ಕನ್ನಡೇತರರ ರೆಸ್ಯುಮೆ ನಿಮ್ಮ ಪರಿಚಯಸ್ತರ ಬಳಗದಲ್ಲಿ ಹಂಚುತ್ತಿದೀರಿ ಅಂತ. ಆಗ ಅವರ ಕಥೆ ಶುರುವಾಯಿತು, ನಾನು ಕೆಲಸ ಶುರುಮಾಡಿದಾಗಲಿನಿಂದ ಕನ್ನಡೇತರರು ಬಹಳ ಸಹಾಯ ಮಾಡಿದಾರೆ ಅದಕ್ಕೋಸ್ಕರ ಅವರಿಗು ಸಹ ಸಹಾಯಮಾಡುವುದು ಸರಿ ಎನ್ನುವುದು ನನ್ನ ಆದರ್ಶ ಎಂದರು.ನೀವೇನೆ ಹೇಳಿದ್ರು ನಿಮ್ಮ ಮಾತಿಗೆ ನಾನು ಒಪ್ಪುವುದಿಲ್ಲ ಅಂತ ನಾನು ಮಾತು ಶುರು ಮಾಡುವ ಮುನ್ನವೆ ಡೈಲಾಗ್ ಹೊಡೆದ್ರು.. ಹೀಗೆ ಹೇಳಿಸಿಕೊಂಡ ಮೇಲೆ ನಾನು ಮಾತಾಡಿಯಾದ್ರು ಏನು ಪ್ರಯೋಜನವೆಂದು ಅರಿತು ತೆಪ್ಪಗಾದೆ. ಆದರೆ ಅವರಿಗೆ ನನ್ನ ಒಂದು ಪ್ರಶ್ನೆಯಿತ್ತು, ಕನ್ನಡೇತರರಿಂದ ಸಹಾಯವಾಗಿದೆ ಅವರಿಗು ಸಹ ಸಹಾಯ ಮಾಡುವುದು ಕರ್ತವ್ಯ ಎಂದು ತಿಳಿಯುವುದು ಸರಿ ನಾನು ಒಪ್ಪುತೀನಿ ಆದರೆ ಕನ್ನಡೇತರರಿಗೆ ಕನ್ನಡ ನಾಡಿನಲ್ಲಿ ನೆಲೆ ಸಿಗುವ ಹಾಗೆ ಸಹಾಯ ಮಾಡುವುದು ಯಾವ ಸೀಮೆ ನ್ಯಾಯ?? ಕರ್ನಾಟಕದ ಹೊರಗೆ ಯಾಕೆ ವಿದೇಶಕ್ಕು ಕಳಿಸಲು ಸಹಾಯಮಾಡಲಿ ನನ್ನ ಅಭ್ಯಂತರವಿಲ್ಲ ಆದರೆ ಕನ್ನಡ ನೆಲದಲ್ಲಿ ಕನ್ನಡೇತರರಿಗೆ influence ಮಾಡಿದರೆ ಸರಿಯಾ? ಮಾತಿನ ಮಧ್ಯದಲ್ಲಿ ಅವರೆಂದರು ಮೊದಲ ಆದ್ಯತೆ ಕನ್ನಡಿಗರಿಗೆ ನಂತರ ಕನ್ನಡೇತರರಿಗೆ ಅಂತ, ಈ ಮಾತಿಗು ನನ್ನ ಒಂದು ಪ್ರಶ್ನೆ ಬಾಕಿ ಉಳಿಯಿತು ಸಾಮಾನ್ಯವಾಗಿ HRಗಳು ಕನ್ನಡೇತರರು, ಟೀಮ್ ಲೀಡರ್ ಏನೆ ಅಂದರು ಮ್ಯಾನೇಜರ್ ಮಾತು ಅಂತಿಮದಾಗಿರುತ್ತದೆ ಅಲ್ಲಿ ಕನ್ನಡೇತರ ಹಾಗು ಕನ್ನಡಿಗನ ಮಧ್ಯೆ ಪೈಪೋಟಿ ಬಂದರೆ ಆಯ್ಕೆಯಾಗುವುದು ಯಾರು ಅಂದ್ಕೊಂಡಿದೀರಾ?ಕನ್ನಡೇತರನೆ ಆಗಿರುತ್ತಾನೆ. ಪರಿಸ್ಥಿತಿ ಇಷ್ಟು ಗಂಭೀರವಾಗಿರುವಾಗ ನಾವು ಕನ್ನಡೇತರರಿಂದ ಸಹಾಯ ಪಡೆದಿದ್ವಿ ಅನ್ನೊ ಒಂದು ಕಾರಣಕ್ಕೆ ಬಲಿಯಾಗಿ sentimental foolಥರ ಆಡ್ತಾ ಕನ್ನಡ ನೆಲದಲ್ಲಿ ಕನ್ನಡೇತರರನ್ನು ಪೋಷಿಸಿದರೆ ಏನು ಹೇಳಬೇಕು?
ಆರ್ಕುಟ್‌ನಲ್ಲಿ ಒಂದು ಕಮ್ಯುನಿಟಿ ಇದೆ ಅದರ ಸದಸ್ಯರೆಲ್ಲರು ಕನ್ನಡಿಗರೆ ಆದರೆ ಅದರ ವಿಚಾರಗಳು ಕೇವಲ ಸದಸ್ಯರಿಗೆ ಮಾತ್ರ ಸೀಮಿತ, ಹೊರಗಿನವರು ವೀಕ್ಷಿಸಲಾಗುವುದಿಲ್ಲ. ಆ ಕಮ್ಯುನಿಟಿಗೆ ೫ ಜನ ಮಾಡರೇಟರ್!!! ಸದಸ್ಯತ್ವ ೪೦೦ ಚಿಲ್ಲರೆ (ಎಷ್ಟೊ ವರ್ಷದಿಂದ), ಕೆಲವು ಮಾಡರೇಟರ್‌ಗಳು ನಿಯಮಿತವಾಗಿ ಅಲ್ಲಿ ಪೋಸ್ಟ್ ಮಾಡ್ತಾನೆ ಇರ್ತಾರೆ ಆದರೆ ಅದು ಅಗತ್ಯದವರಿಗೆ ತಲುಪುತ್ತಾ?? ಗುಂಪಿನ ಮಾಲೀಕ ಎಂದಿಗು ಸಹ ಇತರೆ ಯಾಹೂ ಅಥವಾ ಗೂಗಲ್ ಗುಂಪಿನಲ್ಲಿ ಮಿಂಚೆ ಕಳಿಸಿದ್ದು ನಾನು ಇದುವರೆಗು ನೋಡಿಲ್ಲ. ಇಲ್ಲಿ ಉದ್ದೇಶ ಏನು ಅಂತ ಅರ್ಥೈಸಿಕೊಳ್ಳಬಹುದು? ಕನ್ನಡಿಗನಿಗೆ ಸಹಾಯವಾಗುವುದು ಸೈಡ್‌ನಲ್ಲಿ ಇರ್ಲಿ ಮುಖ್ಯ "ನನ್ನ" ಕಮ್ಯುನಿಟಿ/ಗುಂಪು ಸದಸ್ಯತ್ವ ಹೆಚ್ಚಾಗಲಿ ಅಂತ. ಇತರರೊಂದಿಗೆ ಕೈ ಜೋಡಿಸಿ ಜಾಣ್ಮೆಯಿಂದ ಕೆಲಸ ಮಾಡಿದಲ್ಲಿ ಮತ್ತಷ್ಟು ಸಹಾಯ ಮಾಡಬಹುದಲ್ಲವೆ? ಈ ಆಲೋಚನೆಗಳು ಯಾಕೆ ಕನ್ನಡಿಗರಿಗೆ ಬರುವುದಿಲ್ಲವೊ ಅವರಿಗೆ ಗೊತ್ತಿರ್ಬೇಕು....
ಬಾಟಮ್ ಲೈನ್ ಇಷ್ತೆ: ಕನ್ನಡಿಗರಿಗೆ ಕನ್ನಡಿಗರಾದ ನಾವೆ ಸಹಾಯ ಮಾಡಬೇಕು, ಕನ್ನಡೇತರರಿಗೆ ಸಹಾಯ ಮಾಡಬೇಕು ಅಂತಿದ್ದರೆ ಕರ್ನಾಟಕದ ಹೊರಗೆ ಕಳಿಸಿ.ಕನ್ನಡಿಗರನ್ನೆ ಆಯ್ಕೆ ಮಾಡಿ.ಗುಂಪಿನ ಮಾಡರೇಟರ್‌ಗಳು ಅಥವಾ ಸೈಟ್ ಅಡ್ಮಿನ್‌ಗಳು ತುಂಬಾ ಬುದ್ಧಿವಂತರಾಗಿರುವುದರಿಂದ ಅವರಿಗೆ ತಿಳಿ ಹೇಳಲು ನಾನು ಅರ್ಹನಲ್ಲ. ಆದರು ಸಹ ಒಂದ್ಮಾತು ಅಂದ್ರೆ ಬರಿ quantityನೋಡದೆ ಗುಣಮಟ್ಟ ಸಹ ಕಾಪಾಡಿಕೊಳ್ಳಿ, ಕನ್ನಡಿಗರಿಗೆ ಮಾತ್ರ ಸಹಾಯವಾಗುವ ಅಥವಾ ಅವನ ಕೆಲಸಗಳಿಗೆ ಪೂರಕವಾಗುವಂತೆ ಯೋಜನೆ ಹಾಕಿಕೊಂಡರೆ ಕನ್ನಡಿಗನಿಗೆ ಒಂದುಚೂರಾದ್ರು ಸಹಾಯವಾಗಬಹುದು.