Tuesday, June 29, 2010

ಪ್ಲಾಸ್ಟಿಕ್

on June 3, 2009

ಇನ್ನೇನು ಕೆಲವೆ ದಿನಗಳಲ್ಲಿ,ಮಕ್ಕಳಿಗೆ ಗಣಿತ ಕಲಿಯಲು ಸುಲಭವಾಗುವ ಉದ್ದೇಶವನ್ನಿಟ್ಟುಕೊಂಡು DVDಯೊಂದನ್ನು ಬಿಡುಗಡೆ ಮಾಡಲಾಗುತಿದೆ.ಈ DVDಯಲ್ಲಿರುವ ವಿಷಯ ಕೇವಲ ಗಣಿತಕ್ಕೆ ಸೀಮಿತವಾಗಿರದೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಕಾಳಜಿಯನ್ನು ಮೂಡಿಸುವ ಹಂಬಲವೂ ಇದೆ. http://www.freeganita.com/ ಎಂಬ ಅಂತರಜಾಲದ ತಾಣದ ಸಮಗ್ರ ವಿಷಯವನ್ನು ಈ DVDಆವೃತ್ತಿಯಲ್ಲಿ ಬಿಡುಗಡೆ ಮಾಡಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಚಿಣ್ಣರಿಗೆ ಗಣಿತ ಅಂದ್ರೆ ಕಬ್ಬಿಣದ ಕಡಲೆಯಲ್ಲ ಎಂದು ತಿಳಿಸುವ ಪ್ರಯತ್ನ ಇದಾಗಿರುತ್ತದೆ. ಇದೆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಎಂಬ ವಸ್ತುವಿನ ನೈಜ್ಯ ಚಿತ್ರಣವನ್ನು ಬಿಂಬಿಸಲು ಈ ಲೇಖನವನ್ನು ಬರೆದಿದ್ದೇನೆ.ಗ್ಲೋಬಲ್ ವಾರ್ಮಿಂಗ್ ಎನ್ನುವುದರ ಬಗ್ಗೆಯು ಸಹ ಬರೆಯಲು ಸಹ ಇಚ್ಚಿಸಿದ್ದೇನೆ. ಹಾಗಾಗಿ ಈ ಲೇಖನದಲ್ಲಿ ಕಂಡು ಬರುವ ದೋಷ ಲೋಪಗಳನ್ನು ತಿಳಿಸಿದಲ್ಲಿ ಅಗತ್ಯ ತಿದ್ದುಪಡಿಮಾಡಿ DVDಯಲ್ಲಿ ಪ್ರಕಟಿಸಲು ಸಹಾಯವಾಗುತ್ತದೆ. ಇದೆ ರೀತಿಯಾಗಿ ಮಕ್ಕಳಿಗೆ ತಿಳಿಸಬಹುದಾದಂತಹ ಹಾಗು ಅವರಿಗೆ ಸಹಾಯವಾಗಬಲ್ಲಂತಹ ಲೇಖನ,ವಿಚಾರಗಳು ನಿಮಗೆ ತಿಳಿದಿದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ ಅದನ್ನೂ ಸಹ DVDಯಲ್ಲಿ ಪ್ರಕಟಿಸಲು ವಿಚಾರಮಾಡಬಹುದು.ನಿಮ್ಮ ಹತ್ತಿರ ಈಗಾಗಲೆ ಸಿದ್ಧಪಡಿಸಿದ ಲೇಖನವಿದ್ದರೆ ದಯವಿಟ್ಟು ಅದನ್ನು ನನ್ನ ಮಿಂಚೆಗೆ ಕಳಿಸಿ prasad[dot]preeti[at]gmail[dot]com ಅಥವಾ ನಿಮ್ಮ ಮಿಂಚೆ ತಿಳಿಸಿದಲ್ಲಿ ಮುಂದಿನ ವಿಚಾರಗಳನ್ನು ಚರ್ಚಿಸಬಹುದು. ಕಾಪಿರೈಟೆಡ್ ಲೇಖನವಾಗಿದ್ದರೆ ಅದನ್ನು ಪ್ರಕಟಿಸಲು ತಕ್ಕ ಅನುಮತಿಯಿದ್ದರೂ ನಡೆಯುತ್ತದೆ.ಸ್ವಂತ ಲೇಖನಗಳು ಇದ್ದಲ್ಲಿ ತಲೆ ನೋವ್ವು ಇರೋದಿಲ್ಲ.ಪ್ರಭಂಧ,ಸಣ್ಣ ಕತೆಗಳು,ನೀತಿ ಕತೆಗಳು,ನಾಟಕ,ಪದ್ಯ ಮುಂತಾದ ಯಾವ ವಿಚಾರವಾಗಿದ್ದರು ಸಹ ಹಂಚಿಕೊಳ್ಳಿ.

ಲೇಖನ ಪ್ಲಾಸ್ಟಿಕ್ ಬಗ್ಗೆ...

ಪ್ಲಾಸ್ಟಿಕ್ ಎಂದಾಕ್ಷಣ ನಮಗೆ ತಕ್ಷಣ ತಲೆಗೆ ಹೊಳೆಯೋದು ಕೈಚೀಲಗಳು,ಖುರ್ಚಿ,ಮೇಜು.. ಇತ್ಯಾದಿ. ಆ ಲೆಕ್ಕಕ್ಕೆ ನಮ್ಮ ನಿತ್ಯ ಉಪಯೋಗಿ ವಸ್ತುಗಳಲ್ಲಿ ಹೆಚ್ಚಿನದಾಗಿ ಪ್ಲಾಸ್ಟಿಕ್ ಉಪಕರಣ, ಸಾಧನಗಳನ್ನು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ಉಪಯೋಗಿಸುತ್ತೇವೆ. ಇಷ್ಟೆಲ್ಲಾ ಬಹುಪಯೋಗಿ ವಸ್ತು ಆಗಿದ್ರು ಸಹ ಒಂದೆಡೆ ಪರಿಸರ ಪ್ರೇಮಿಗಳ ಕೂಗು ಇದ್ದೆ ಇದೆ.ಪ್ಲಾಸ್ಟಿಕ್ ನ ಬಳಕೆ ಹಾನಿಕಾರಕ ಅಂತ.ಹೀಗೆ ಪ್ಲಾಸ್ಟಿಕ್ ನ ಪರ ಹಾಗು ವಿರೋಧಿ ಅಂಶಗಳ ಚರ್ಚೆ ಮಾಡುವ ಮುನ್ನ ನಾವು ಪ್ಲಾಸ್ಟಿಕ್ ನ ಇತಿಹಾಸ ಸ್ವಲ್ಪ ತಿಳಿದುಕೊಂಡು ತದನಂತರ ಪೂರ್ವಾಪರಗಳ ಬಗ್ಗೆ ಆಲೋಚಿಸಿದರೆ ಒಳಿತು.

ಪ್ಲಾಸ್ಟಿಕ್ ಬೆಳೆದು ಬಂದ ರೀತಿ
೧೮೬೨ರಲ್ಲಿ ಲಂಡನ್ನಲ್ಲಿ ನಡೆದ ಒಂದು ಪ್ರದರ್ಶನದಲ್ಲಿ ಮೊದಲ ಬಾರಿಗೆ "ಇಂದಿನ ಪ್ಲಾಸ್ಟಿಕ್ ಅನ್ನು ಹೋಲುವಂತಹ" ವಸ್ತುವೊಂದನ್ನು ಅಲೆಕ್ಸಾಂಡರ್ ಪರ್ಕೆಸ್ ಎನ್ನುವವರು ಜಗತ್ತಿಗೆ ಪರಿಚಯಿಸಿದರು. ಆದ್ರೆ ಈ ಬಗೆಯ ಪ್ಲಾಸ್ಟಿಕ್ ತಯಾರಿಸಲು ಕಚ್ಚಾ ವಸ್ತುಗಳು ತುಂಬ ದುಬಾರಿಯಾಗಿದ್ದ ಕಾರಣ ಈ ಪದಾರ್ಥವನ್ನು ಕೈ ಬಿಡಲಾಯಿತು. ಈ ಘಟನೆ ನಡೆದು ಕೇವಲ ೭ ವರ್ಷಗಳ ನಂತರ ಅಂದ್ರೆ ೧೮೬೯ ರಲ್ಲಿ ಜಾನ್ ವೆಸ್ಲಿ ಹ್ಯಾತ್ತ್ ಎಂಬುವವರು ಪ್ಲಾಸ್ಟಿಕ್ ಅನ್ನು ಉತ್ಪಾದಿಸಲು ಮೊದಲ ಪ್ರಯೋಗ ಮಾಡಿದ್ರು. ಈ ಪ್ರಯೋಗಕ್ಕೆ ಬಳಸಿದ ವಸ್ತುಗಳು ತುಂಬ ತಿಳಿಯಾದ ನೈಟ್ರಿಕ್ ಹಾಗು ಸಲ್ಫ್ಯೂರಿಕ್ ಆಸಿಡ್ ಗಳ ಮಿಶ್ರಿತ ಪೇಪರ್, ಅದೇ celluloid . ಈ ಮಿಶ್ರಣ "flammable" ಪದಾರ್ಥಗಳಿದ್ದ ಕಾರಣ ಸಫಲವಾಗಲಿಲ್ಲ. ಆದರೆ ಸೆಲ್ಲ್ಯುಲಾಯ್ಡ್‌ಅನ್ನು film reels ಮಾಡಲು ಯೋಗ್ಯವಾಯಿತು. ತರುವಾಯ ೧೮೭೨ರಲ್ಲಿ ಯುಗೆನ್ ಬೌಮನ್ನ್ ಎನ್ನುವವರು PVCಯನ್ನು ಕಂಡು ಹಿಡಿದರು. ನಂತರ ೧೯೦೭ರಲ್ಲಿ, ಲಿಯೋ ಬೇಕಲ್ಯಾಂಡ್ ಅನ್ನುವವರು, ನಾವು ಇಂದು ಮಾರುಕಟ್ಟೆಯಲ್ಲಿ ಕಾಣುವ "ಪ್ಲಾಸ್ಟಿಕ್" ಕಂಡು ಹಿಡಿದರು. ಶಾಖ ಕೊಟ್ಟಾಗ ಮೆತ್ತಗೆ, ಹಾಗು ತಣ್ಣಗೆ ಮಾಡಿದಾಗ ಗಟ್ಟಿ ಆಗುವ ಈ ಪದಾರ್ಥ ಎಲ್ಲರ ಗಮನ ಸೆಳೆಯಿತು,ವ್ಯಾಪಾರ ದೃಷ್ಟಿಯಿಂದ ಎಲ್ಲರ ಕಣ್ಣು ಕುಕ್ಕಿತು.ಪ್ಲಾಸ್ಟಿಕ್ ನ ಮೊದಲು ಎಲ್ಲರು ಪೇಪರ್,ಕಬ್ಬಿಣ,ತಾಮ್ರ, ಗಾಜು ಇಂಥಾದವುಗಳ ಮೇಲೆ ಅವಲಂಬಿತರಿದ್ದರು.
ಆದ್ರೆ ಪ್ಲಾಸ್ಟಿಕ್ ಅನ್ನೋದು ಮನುಷ್ಯನಿಂದ ಮನುಷ್ಯನಿಗಾಗಿ,ನೈಸರ್ಗಿಕ ಸಂಪನ್ಮೂಲಗಳ ಮೇಲೆ ಅವಲಂಬಿತವಾಗದೆ ತಯಾರಿಸಬಹುದಾದಂತಹ ಮೊದಲ ವಸ್ತುವಾಯಿತು.ಹಾಗಾಗಿ ಯಾವ ಯಾವ ವಸ್ತುಗಳನ್ನು ತಯಾರಿಸಲು ಆಗುತ್ತಿತ್ತೋ ಅವನ್ನೆಲ್ಲ ಪ್ಲಾಸ್ಟಿಕ್ ನಿಂದ ತಯಾರಿಸಲು ಶುರು ಮಾಡಿದರು.ತದನಂತರ ಈ ಪ್ಲಾಸ್ಟಿಕ್ ನಿಂದ ಹಲವಾರು ಕುಡಿಗಳು ಚಿಗುರೊಡೆದವು vinyl,acryllic,ethylene ಅಂತ ಹುಟ್ಟಿಕೊಂಡವು.ಇಂದಿಗೂ ಸಹ ಪ್ಲಾಸ್ಟಿಕ್ ನ ಗುಣಧರ್ಮಗಳನ್ನು ಬದಲಾಯಿಸಿ ಸಂಶೋಧನೆ ನಡಿಯುತ್ತಲೇ ಇದೆ ಹಾಗಾಗಿ ನಾವು ಇಂದು PVC ಪೈಪ್ಗಳನ್ನು ನೋಡಲು ಸಾಧ್ಯವಾದವು,ಹಗುರ,ಗಟ್ಟಿ ಹಾಗು ಧೀರ್ಘ ಬಾಳಿಕೆ ಬರುವಂಥಾದ್ದು.ಹೀಗೆ ವ್ಯಾವಹಾರಿಕವಾಗಿ ತುಂಬಾ ಲಾಭದಾಯಕವಾಗಿರುವುದನ್ನ ಮನೆ ಮನೆಗೂ ತಲುಪುವಂತೆ ಮಾಡಿದರು.

ಇದಕ್ಕಾಗಿಯೇ ೧೯೩೭ರಲ್ಲಿ SPI (ಪ್ಲಾಸ್ಟಿಕ್ ಕೈಗಾರಿಕೆಗಳ ಸಮುದಾಯ) ಸಂಸ್ಥೆ ಕೂಡ ಸ್ಥಾಪಿಸಲಾಯಿತು. ನಾವು ಇಂದು ನೀರು ಕುಡಿಯಲು ಬಳಸುವ PET(PolyEthylene Terephthalate) ಬಾಟಲ್ ಗಳನ್ನು ೧೯೭೫ರಲ್ಲಿ ಕಂಡು ಹಿಡಿಯಲಾಯಿತು. ಪ್ರತಿ PET ಬಾಟಲ್ ನ ಗುಣಮಟ್ಟದ ಆಧಾರದ ಮೇರೆಗೆ ಒಂದು ದರ್ಜೆಯನ್ನು ಗುರುತಿಸಿ ಅದನ್ನು ಬಾಟಲ್ ನ ತಳ ಭಾಗದಲ್ಲಿ ಮುದ್ರಿಸಿರುತ್ತಾರೆ, ಈ ದರ್ಜೆ ೧-೭ ಆಗಿರುತ್ತದೆ.

ಸಾಮಾನ್ಯವಾಗಿ ತಂಪಾದ ಪಾನೀಯಗಳನ್ನು ಇಂಥಹ ಬಾಟಲ್ ನಲ್ಲಿ ಶೇಖರಿಸುತ್ತಾರೆ. ಹಾಗಾಗಿ ಇಂಥಹ ಬಾಟಲ್ ಗಳಲ್ಲಿ ಕುಡಿಯುವ ನೀರು ಶೇಖರಿಸಿ ಪುನರ್ಬಳಕೆ ಮಾಡುವುದರಿಂದ ಕಾಲಾಂತರದಲ್ಲಿ ನಮಗೆ ಹಾನಿಕರ.

ಪರ ವಿಚಾರಗಳು:
ಪ್ಲಾಸ್ಟಿಕ್ ಕಂಡು ಹಿಡಿಯುವ ಮುನ್ನ ದಿನ ನಿತ್ಯ ವಸ್ತುಗಳ ತಯಾರಿಕೆಗೆ ಮುಖ್ಯವಾದ ಕಚ್ಚಾ ವಸ್ತುವಾಗಿದ್ದುದು ಕಬ್ಬಿಣ,ಗಾಜು ಹಾಗು ಮರ, ಇತರೆ ಕಚ್ಚಾ ವಸ್ತುವೇನಿದ್ದರು ಪಟ್ಟಿಯಲ್ಲಿ ಅಮೇಲಿನದಾಗಿರುತ್ತಿತ್ತು.ಒಮ್ಮೆ ಯೋಚಿಸಿ, ನಮ್ಮ ದಿನೋಪಯೋಗಿ ವಸ್ತುಗಳಾದ ಟೂತ್ ಬ್ರಷ್‌ ಮರದ್ದಾಗಿದ್ದರೆ ಹೇಗಿರುತ್ತಿತ್ತು, ನೀರು ಹಾಯಿಸಲು ಪಿ.ವಿ.ಸಿ ಪೈಪ್ ಬದಲು ಕಬ್ಬಿಣ ಪೈಪ್ ಬಳಸಿದರೆ ಖರ್ಚು ಎಷ್ಟು? ಭಾರವೆಷ್ಟು,ಎಷ್ಟು ಬೇಗ ತುಕ್ಕು ಹಿಡಿಯುತ್ತಿತ್ತು.. ಹೀಗೆಯೆ ನಮ್ಮ ಗಾಡಿಯ ಬಿಡಿ ಭಾಗಗಳು ಸಹ ಕಬ್ಬಿಣದ್ದಾಗಿದ್ದರೆ ಗಾಡಿಯ ಭಾರ ಹೆಚ್ಚಿ, ಪ್ರತಿ ಲೀಟರ್‌ಗೆ ಸರಾಸರಿ ೫೦ ಕಿ.ಮಿ ಮೈಲೇಜ್ ಕೊಡುವ ವಾಹನ ಏಕಾಏಕಿ ೩೫-೪೦ ಕಿ.ಮಿ ಕೊಡುವ ಹಾಗಾದರೆ ಹೇಗಿರುತ್ತಿತ್ತು?ಪರಿಸರ ಮಾಲೀನ್ಯ ಹಾಗು ಜೇಬಿಗೂ ಭಾರ ಅಲ್ಲವೆ. ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಅಥವಾ ಪರ್ಯಾಯ ಸಾಧನವಾಗಿ ಜನ-ಜೀವನದಲ್ಲಿ ತನ್ನ ಛಾಪು ಮೂಡಿಸಿದ ವಸ್ತು ಪ್ಲಾಸ್ಟಿಕ್.
ಋಷಿ ಮುನಿಗಳು ಕಮಂಡಲ ಬಳಸುತ್ತಿದ್ದರು, ನಂತರ ಪುಣ್ಯ ಕ್ಷೇತ್ರಗಳಿಗೆ ಹೋಗುವಾಗ ಸಹಾಯವಾಗಲೆಂದು ಹಿಡಿಕೆ ಹಾಗು ಮುಚ್ಚಳವಿರುವ ತಾಮ್ರದ ಚಂಬುಗಳು ಹುಟ್ಟಿಕೊಂಡವು ಆದರೆ ಪ್ಲಾಸ್ಟಿಕ್‌ನ ಪರಿಚಯದ ನಂತರ ಎಲ್ಲೆಡೆಯು ಪ್ಲಾಸ್ಟಿಕ್‌ ಬಾಟಲ್‌ಮಯವಾಯಿತು ಇಲ್ಲವಾದಲ್ಲಿ ಮಕ್ಕಳು ಶಾಲೆಗೆ ಮಧ್ಯಾನ್ಹ ಊಟ ಮಾಡಲು ಚಂಬನ್ನು ಸಹ ತೆಗೆದುಕೊಂಡು ಹೋಗುವ ಪರಿಸ್ಥಿತಿ ಬರುತ್ತಿತ್ತು. ಆದ್ದರಿಂದ ಪ್ಲಾಸ್ಟಿಕ್‌ ಎನ್ನುವುದು ಮನುಷ್ಯನ ಇತಿಹಾಸದಲ್ಲೆ ಅತ್ಯಂತ ಮಹತ್ತರವಾದ ಸಂಶೋಧನೆಯಾಯಿತು.
ಬೆಳಗ್ಗೆ ಎದ್ದು ಹಲ್ಲುಜಲು ಬಳಸುವ ಟೂತ್ ಬ್ರಷ್‌ನಿಂದ ಹಿಡಿದು ಬಾಚಣಿಗೆ,ಬಾಗಿಲು,ಬಕೀಟು,ಚಂಬು,ಖುರ್ಚಿ,ಕೈ ಚೀಲ,ಪೊರಕೆಯ ಹಿಡಿಕೆಗಳು,ರೈನ್ ಕೋಟ್,ಚಪ್ಪಲಿ ಕೊನೆಗೆ ಮಲಗುವ ಮುನ್ನ ದೀಪ ಆರಿಸುವ ಸ್ವಿಚ್ ಸಹ ಪ್ಲಾಸ್ಟಿಕ್ ನದ್ದೆ ಆಗಿರುತ್ತದೆ. ಮನುಷ್ಯನ ಆಲೋಚನಾ ಶಕ್ತಿಗೆ ಯಾವುದೆಲ್ಲಾ ನಿಲುಕಿತೋ ಅವನ್ನೆಲ್ಲ ಪ್ಲಾಸ್ಟಿಕ್ ಗೆ ಮಾರ್ಪಡಿಸಲು ಯತ್ನಗಳು ನಡೆಯುತ್ತಿವೆ. ನೈಸರ್ಗಿಕವಲ್ಲದ ಇದನ್ನು ಮನುಷ್ಯರಿಗೆ ಅನ್ಯ ಮಾರ್ಗವಿಲ್ಲದೆ ಪ್ರತಿ ಕೆಲಸಗಳಲ್ಲೂ ಅವಶ್ಯಕವಿರುವ ಪದಾರ್ಥ ಎನ್ನುವಂತೆ ಮಾರುಕಟ್ಟೆ ಮಾಡಿದ ವಸ್ತುವಾಗಿದೆ. ಇದರಿಂದಾಗಿ ಪ್ಲಾಸ್ಟಿಕ್ ತಯಾರಿಕಾ ಘಟಕಗಳು ಜಗತ್ತಿನಲ್ಲೇ ಅತ್ಯಂತ ದೊಡ್ಡ ಕಾರ್ಖಾನೆಯಾಗಿ ಬೆಳೆದಿದೆ. ಉದ್ಯಮ ಬೆಳೆದಂತೆ ಜನರಿಗೆ ಕೆಲಸ ಸಿಗಲು ಆರಂಭವಾಯಿತು.ಹೊಸ ಅನ್ವೇಶಣೆಗಳಿಗೆ ಆಡಿಗಲ್ಲಾಯಿತು,ಕೆಲಸ ಸಿಕ್ಕ ನಂತರ ಜನರ ಜೀವನ ಶೈಲಿ ಉತ್ತಮಗೊಂಡು ದೇಶ ಪ್ರಗತಿಗೆ ಸಹಕಾರಿಯಾಯಿತು. ಜಗತ್ತಿನೆಲ್ಲೆಡೆ ದೇಶ ವಿದೇಶಗಳ ಮಧ್ಯೆ ವ್ಯವಹಾರವು ಕುದುರಿತು, ದೇಶದ ಆರ್ಥಿಕ ಸ್ಥಿತಿ ಉತ್ತಮವಾಗುವಂತೆ ಮಾಡಿತು. ಧೀರ್ಘ ಬಾಳಿಕೆಯ,ಹಗುರವಾದ,ತುಕ್ಕು ಹಿಡಿಯದ,ಹೆಚ್ಚು ಒತ್ತಡ ಸಹಿಸುವ ಎಲ್ಲಕಿಂತ ಮುಖ್ಯವಾಗಿ ಬೇಗನೆ ಹಾಳಾಗದಿರುವ ಅಗ್ಗದ ಬೆಲೆಗೆ ಸಿಗುವಂತಹ ಪ್ಲಾಸ್ಟಿಕ್ ಉಪಕರಣಗಳು ಜೇಬಿನ ಮೇಲೆ ಹಗುರವಾಗಿ,ಪ್ರಯೋಜನಕಾರಿ ವಸ್ತುವಾಗಿ ಲಭ್ಯವಾಯಿತು. ಕಣ್ಣಿಗೆ ಆಕರ್ಷಕವಾಗಿ ಕಾಣುವ ಬಣ್ಣಗಳಲ್ಲಿ ಪ್ಲಾಸ್ಟಿಕ್ ಉಪಕರಣಗಳು ಬಂದವು. ಅಲಂಕಾರಿಕ ವಸ್ತುವಾಗಿ ಬಳಸುವಂತಾಯಿತು. ಹೇಳಬೇಕೆಂದರೆ ಪ್ಲಾಸ್ಟಿಕ್ ಇಲ್ಲದೆಯೇ ಜಗತ್ತನು ಊಹಿಸಿಕೊಳ್ಳಲು ಸಾಧ್ಯವಿಲ್ಲದ ಮಟ್ಟಿಗೆ ಅದು ನಮ್ಮ ಜೀವನಕ್ಕೆ ಅತ್ಯಂತ ಉಪಯುಕ್ತವಾದಂತಹ ಸಂಶೋಧನೆಯಾಗಿ ಪರಿಣಮಿಸಿದೆ. ಪ್ಲಾಸ್ಟಿಕ್‌ನ ಸ್ಥಾನವನ್ನು ಬೇರೆ ಯಾವುದೇ ವಸ್ತುವು ಆಕ್ರಮಿಸಿಕೊಳ್ಳಲು ಸಾಧ್ಯವಾಗದ ಮಟ್ಟಿಗೆ ನಮ್ಮ ಸಾಧನಗಳಲ್ಲಿ ಬೆಸೆದು ಕೊಂಡಿವೆ. ಹೊರನೋಟಕ್ಕೆ ಬೆಲೆಬಾಳುವ ವಸ್ತುಗಳಂತೆಯೇ ಕಾಣುವ ಪ್ಲಾಸ್ಟಿಕ್ ಉಪಕರಣಗಳು ಅಗ್ಗದ ಬೆಲೆಯಲ್ಲಿ ಸಾಮಾನ್ಯ ಜನರಿಗೆ ಸಿಕ್ಕು ಅವರ ಮನವನ್ನು ಸಂತೋಷಿಸುತ್ತದೆ.

ವಿರೋಧ ವಿಚಾರಗಳು:
ಪ್ಲಾಸ್ಟಿಕ್ ಒಂದು ಗೋಮುಖ ವ್ಯಾಘ್ರವಿದ್ದಂತೆ. ನಿತ್ಯ ಜೀವನ ಉಪಕರಣಗಳಿಗೆ ಅಗತ್ಯ ವಸ್ತುವೆಂದೆನಿಸಿದರು ಸಹ ಅದರ ತಯಾರಿಕ ಹೆಜ್ಜೆಯಿಂದ ಹಿಡಿದು ಇನ್ನು ಉಪಯೋಗವಿಲ್ಲವೆಂದು ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯ ತದನಂತರ ನೈಸರ್ಗಿಕವಾಗಿ ಕೊಳೆಯದೆ ೧೦ ಲಕ್ಷ ವರ್ಷಗಳ ನಂತರವೂ ಹಾಗೆ ಉಳಿಯುವ ಕರಾಳ ಗುಣಧರ್ಮವನ್ನು ಸಹ ಹೊಂದಿದೆ.ಕೇವಲ ಒಂದು ಕಿಲೊ ಕಚ್ಚಾ ಪ್ಲಾಸ್ಟಿಕ್ ತಯಾರಿಕೆಗೆ ಬೇಕಾಗುವ ಶಕ್ತಿ, ೧೦೦ watt ಬಲ್ಬ್ ಅನ್ನು ೫೬ ವರ್ಷ ಸತತವಾಗಿ ಉರಿಸಬಹುದು.ಇದಕ್ಕೆ ಹೋಲಿಸಿದರೆ ಯೋಚಿಸಿ,ಕೇವಲ ಒಂದು ಕಿಲೊಗೆ ಎಷ್ಟು ಶಕ್ತಿ ಖರ್ಚು ಆಗುತ್ತಿದೆ ಎಂದು.ಖುರ್ಚಿ,ಬಾಗಿಲು,ಟೇಬಲ್ ತಯಾರಿಸಲು ಎಷ್ಟೆಲ್ಲಾ ಕಿಲೊಗಟ್ಟಲೆ ಪ್ಲಾಸ್ಟಿಕ್ ಬೇಕಾಗುತ್ತದೆ!!!ಮೊದಲ ಪ್ರಶ್ನೆ ಎಷ್ಟು ಶಕ್ತಿ ಬೇಕಾಗಿರುವುದು ಅಂತ ಆದರೆ, ಈ ತಯಾರಿಕಾ ಘಟಕಗಳಲ್ಲಿ ಬಿಡುಗಡೆಯಾಗುವ ವಿಷಯುಕ್ತ ಅನಿಲಗಳು ನಾವು ಉಸಿರಾಡುವ ಗಾಳಿಯನ್ನು ಸಹ ಕಲುಷಿತಗೊಳಿಸುತ್ತದೆ. ಪ್ಲಾಸ್ಟಿಕ್ ಅನ್ನು ಸಂಸ್ಕರಿಸುವ ವಿಧಾನದಲ್ಲಿ ಅವಶ್ಯಕವಿರುವ ನೀರು ಕಲುಷಿತಗೊಂಡು ನೆಲ ಹಾಗು ಜಲ ಮೊಲಗಳನ್ನು ಸೇರಿ ಅದನ್ನು ಸಹ ಹಾಳು ಮಾಡುತ್ತದೆ.ನಾವು ನಮ್ಮ ಮನೆಯ ಆವರಣದಲ್ಲಿ ಬೋರ್ ಹಾಕಿಸಿ ಅಂತರ್ ಜಲದ ನೀರು ಮೇಲೆತ್ತಿದಾಗ ಇದೆ ಕಲುಷಿತ ನೀರು ನಮ್ಮ ಅರಿವಿಲ್ಲದಂತೆಯೇ ಅಡುಗೆ ಕೊಣೆಯನ್ನೂ ಸೇರುತ್ತದೆ. ಇಂತಹ ನೀರನ್ನು ಬಳಸಿದಾಗ ಕೆಲವೊಮ್ಮೆ ತಾತ್ಕಾಲಿಕ ರೋಗ ಉಂಟಾದರೂ ಧೀರ್ಘ ಕಾಲದ ರೋಗಗಳು ಬರುವುದರಲ್ಲಿ ಸಂಶಯವಿಲ್ಲ.ಸಿಗರೇಟು,ತಂಬಾಕು ಚಟವಿದ್ದರೆ ಹೇಗೆ ಮೊದಲು ಸುಸ್ಥಿತಿಯಲ್ಲಿರುವವರ ಆರೋಗ್ಯ ನಿಧಾನವಾಗಿ ಹದಗೆಟ್ಟು ಕ್ಯಾನ್ಸರ್‌ನಂತಹ ರೋಗಕ್ಕೆ ತುತ್ತಾಗಿ ಸಾಯುತ್ತಾರೊ ಹಾಗೆಯೆ ಪ್ಲಾಸ್ಟಿಕ್‌ನಲ್ಲಿ ಆಹಾರ ಪದಾರ್ಥಗಳನ್ನು ಶೇಖರಿಸಿ ಉಪಯೋಗಿಸಿದರೆ ಧೀರ್ಘ ಕಾಲದ ರೋಗಗಳಿಗೆ ತುತ್ತಾಗಬೇಕಾಗುತ್ತದೆ.ನಾವು ಊಟದ ಡಬ್ಬಕ್ಕೆ ಪ್ಲಾಸ್ಟಿಕ್ ಡಬ್ಬವನ್ನು ಬಳಸಿದರೆ,ಬಿಸಿ ಬಿಸಿಯಾದ ಆಹಾರ ಪ್ಲಾಸ್ಟಿಕ್ ನೊಂದಿಗೆ ಬೆರೆತು ನಗ್ನ ಕಣ್ಣಿಗೆ ಕಾಣದ ರಾಸಾಯನಿಕ ಕ್ರಿಯೆಯುಂಟಾಗಿ ತಿನ್ನುವ ಪದಾರ್ಥವನ್ನು ಹಾಳು ಮಾಡುತ್ತದೆ, ಇಂತಹ ಅಡುಗೆಯನ್ನು ತಿಂದಾಗ ನಿಮಗೆ ಪ್ಲಾಸ್ಟಿಕ್ ತಿಂದ ಅನುಭವವಾದಲ್ಲಿ ಆಶ್ಚರ್ಯವಿಲ್ಲ.ಈ ಕ್ರಿಯೆಯಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳು ತಿನ್ನುವ ಪದಾರ್ಥವನ್ನು ಕಲುಷಿತಗೊಳಿಸುತ್ತದೆ,ಇದರ ಅರಿವಿಲ್ಲದೆ ನಾವು ತಿಂದಾಗ ಅಥವಾ ಬಿಸಿ ಬಿಸಿಯಾದ ಚಹಾ/ಕಾಫಿ/ಹಾಲು ಮುಂತಾದ ಪಾನೀಯಗಳನ್ನು ಪ್ಲಾಸ್ಟಿಕ್ ಲೋಟಗಳಲ್ಲಿ ಸೇವಿಸಿದಾಗ ನಮ್ಮ ಆರೋಗ್ಯವು ಹಾಳಾಗುವುದರಲ್ಲಿ ಸಂಶಯವಿಲ್ಲ.ಒಂದು ಥೆಳುವಾದ (ದಪ್ಪನದಲ್ಲ ಎಂಬುದು ಗಮನದಲ್ಲಿರಲಿ!!) ಪ್ಲಾಸ್ಟಿಕ್ ಚೀಲ ನೈಸರ್ಗಿಕವಾಗಿ ಕೊಳೆಯಲು ಹಲವು ಮಿಲಿಯನ್ ವರ್ಷ ಬೇಕಾಗುತ್ತದೆ, ಅಂದಾಜಿಗೆ ಹತ್ತು ಲಕ್ಷ ವರ್ಷ. ಅವು ಕೊಳೆಯುವ ಪ್ರಕ್ರಿಯೆ ಕೂಡ ಭಯಾನಕ ಅನೇಕ ರೀತಿಯ ವಿಷಯುಕ್ತ ಅನಿಲಗಳನ್ನು ಗಾಳಿಗೆ ಬಿಡುಗಡೆ ಮಾಡುತ್ತದೆ ವಿಷಯುಕ್ತ ರಾಸಾಯನಿಕಗಳನ್ನು ಭೂಮಿಗೆ ಬಿಡುಗಡೆ ಮಾಡಿ ಕೊಳೆಯುತ್ತದೆ. ಹೀಗಾಗಿ ಅವು ಉಪಯುಕ್ತವಾಗಿದ್ದಾಗಲು ಆರೋಗ್ಯಕ್ಕೆ ಹಾನಿಕಾರಕ,ಕೊಳೆಯ ಬೇಕಾದರೂ ಆರೋಗ್ಯಕ್ಕೆ/ಪರಿಸರಕ್ಕೆ ಹಾನಿಕಾರಕ.ಪೇಪರ್ ನೈಸರ್ಗಿಕವಾಗಿ ಬೇಗನೆ ಕೊಳೆಯುತ್ತದೆ,ವಿಷಯುಕ್ತ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ ಆದರೆ ಪ್ಲಾಸ್ಟಿಕ್ ಇದಕ್ಕೆ ವ್ಯತಿರಿಕ್ತ .
ಕುಡಿಯುವ ನೀರನ್ನು PET ಬಾಟಲ್ ಗಳಲ್ಲಿ ಶೇಖರಿಸಿಟ್ಟು ಕುಡಿದರೆ ಹಲವಾರು ಕ್ಯಾನ್ಸರ್ ಬರುತ್ತದೆ ತಕ್ಷಣವೇ ಇದರ ಲಕ್ಷಣಗಳು ಕಾಣದೆ ಇದ್ದರು ಹಲವಾರು ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಬಳಸಿ ಬಿಸಾಡುವ ಪ್ರತಿ ಪ್ಲಾಸ್ಟಿಕ್ ಬಾಟಲ್/ಕವರ್/ಇತರೆಗಳು ನಮ್ಮ ಭೂಮಿಯನ್ನು ಮಲಿನಗೊಳಿಸುತ್ತವೆ. ನಮ್ಮ ಪರಿಸರದ ನಿರ್ಮಲತೆಯನ್ನು ಹಾಳುಗೆಡವುತ್ತದೆ. ಮುಂದಿನ ಪೀಳಿಗೆಗಳು ಇಂತಹ ಮಲಿನಗೊಂಡ ಭೂಮಿ, ಉಸಿರಾಡಲು ಕಲುಷಿತ ಗಾಳಿ, ತಿಪ್ಪೆಯಂತಹ ವಾತಾವರಣದ ಮಧ್ಯೆ ಬದುಕ ಬೇಕಾಗುವ ಅನಿವಾರ್ಯತೆ ಉಂಟಾಗುತ್ತದೆ.

ತಿಳಿದುಕೊಳ್ಳಬೇಕಾದ ವಿಚಾರ

ಪ್ಲಾಸ್ಟಿಕ್ ಅನ್ನು ಏಕಾ ಏಕಿ ತ್ಯಜಿಸಲು ಸಾಧ್ಯವಿಲ್ಲದೇ ಇದ್ದರು ಸಹ ಅವನ್ನು ಆದಷ್ಟು ನಾಜೂಕಾಗಿ,ಮಿತಿಯಲ್ಲಿ ಬಳಸಬೇಕು. ದುಷ್ಟರಿಂದ ದೂರ ಇರು ಎನ್ನುವ ಹಾಗೆ ಪ್ಲಾಸ್ಟಿಕ್ ವಸ್ತುಗಳಿಂದ ಆದಷ್ಟು ದೂರವಿರಬೇಕು.ನಮ್ಮ ಜೀವನ ಹೇಗೆ ಅಡೆ ತಡೆಗಳಿಲ್ಲದೆ ಸುಗಮವಾಗಿ ಸಾಗಲು ಇಚ್ಚಿಸುತ್ತೆವೆಯೋ ಹಾಗೆ ನಮ್ಮ ಸುತ್ತ ಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಎಲ್ಲರೂ ಸ್ವಚ್ಚವಾದ ವಾತಾವರಣದಲ್ಲಿ ಬದುಕುವ ಹಾಗೆ ಮಾಡಬೇಕು. ಪ್ಲಾಸ್ಟಿಕ್ ನ "ನಿಜ" ಗುಣಗಳ ಬಗ್ಗೆ ಅರಿವಿಲ್ಲದವರಿಗೆ ತಿಳಿ ಹೇಳಬೇಕಾದದ್ದು ವಿಷಯ ಅರಿತುಕೊಂಡವರ ಧರ್ಮ ಹಾಗು ಕರ್ತವ್ಯ. ಸುಂದರ, ಸ್ವಚ್ಛ, ಸಮಾಜ ಕಟ್ಟಲು ನಾವು ಮಾಡುವ ಅತಿ ಸಣ್ಣ ಕೆಲಸವಾಗುತ್ತದೆ.
ಪ್ರತಿ ನಿತ್ಯ ಪ್ಲಾಸ್ಟಿಕ್ ಅನ್ನು ಎಲ್ಲಿ ಎಲ್ಲಿ ಬಳಸುತ್ತೇವೆಯೋ ಆಯಾ ಸಂಧರ್ಭಗಳಲ್ಲಿ ಅವುಗಳನ್ನು ಉಪಯೋಗಿಸದೆ ಪರ್ಯಾಯ ಮಾರ್ಗದಿಂದ ಕಾರ್ಯಸಾಧನೆ ಮಾರ್ಗ ಯೋಚಿಸಬೇಕು.
ಗೊತ್ತಾಗದಿದ್ದರೆ ಕೇಳಿ ತಿಳಿದುಕೊಳ್ಳಬೇಕು, ಸಫಲವಾದ ಸ್ವಂತ ಆಲೋಚನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು.
ಉದಾಹರಣೆಗೆ :
೧. ಅಂಗಡಿಗೆ ಹೋಗುವ ಮುನ್ನ ಮನೆಯಿಂದ ಬಟ್ಟೆಯ ಕೈ ಚೀಲ ಅಥವಾ ಮೊದಲೇ ಉಪಯೋಗಿಸಿದ ಪ್ಲಾಸ್ಟಿಕ್ ಚೀಲವನ್ನು ತೆಗೆಕೊಂಡು ಹೋಗಬೇಕು. ಇದರ ಉದ್ದೇಶ, ಹೊಸ ಪ್ಲಾಸ್ಟಿಕ್ ಚೀಲದ ಬಳಕೆಯಾಗದಂತೆ ತಡೆಯುವುದು.
೨. ಪ್ಲಾಸ್ಟಿಕ್ ವಸ್ತುಗಳನ್ನು ಸಾಧ್ಯವಾದಷ್ಟು ಪುನರ್ಬಳಕೆ ಮಾಡಬೇಕು.
೩. ಊಟದ ಪದಾರ್ಥ ಅಥವಾ ಪಾನೀಯಗಳನ್ನು ಪ್ಲಾಸ್ಟಿಕ್‌ನ ಸಂಪರ್ಕಕ್ಕೆ ಬಾರದಂತೆ ಪ್ರತ್ಯೇಕವಾಗಿ ಇಡಬೇಕು.ಇದು ಬಹು ಮುಖ್ಯ.
೪. ರೆಫಿಲ್ ಪೆನ್ ಬದಲು ಇಂಕ್ ಪೆನ್ ಗಳನ್ನು ಬಳಸಬೇಕು.
೫. ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು.ನಿಮ್ಮ ಊರಿನಲ್ಲಿ ಪ್ಲಾಸ್ಟಿಕ್ ಪುನರ್ಬಳಕೆ ಸಂಸ್ಕರಣ ಘಟಕಗಳಿದ್ದರೆ, ಉಪಯೋಗಕ್ಕೆ ಬಾರದ ಪ್ಲಾಸ್ಟಿಕ್ ವಸ್ತುಗಳನ್ನು ಪ್ರತ್ಯೇಕವಾಗಿ ಶೇಖರಿಸಿ ಅವರಿಗೆ ವಿಚಾರ ತಿಳಿಸಿದಲ್ಲಿ ಬಂದು ಒಯ್ಯುತ್ತಾರೆ.
೬. ಊಟದ ಚೀಲಗಳನ್ನು ಹಾಗೆಯೇ ತಿಪ್ಪೆಗೆ ಹಾಕುವುದರಿಂದ ಅದ್ರಲ್ಲಿ ಉಳಿದಿರುವ ಆಹಾರ ಪದಾರ್ಥವನ್ನು ತಿನ್ನಲು ಬರುವ ಹಸು,ಕರು ಅರಿವಿಲ್ಲದೆಯೇ ಪ್ಲಾಸ್ಟಿಕ್ ಕವರ್ ಅನ್ನು ಸಹ ತಿನ್ನುತ್ತದೆ. ಈ ಪ್ಲಾಸ್ಟಿಕ್ ಚೀಲ ಪ್ರಾಣಿಗಳ ಹೊಟ್ಟೆ ಸೇರಿ ಅವುಗಳ ಸಾವಿಗೆ ಸಹ ಕಾರಣವಾಗುತ್ತದೆ. ಇಂತಹ ಸಾವಿಗೆ ನಮ್ಮ ಅಜ್ಞಾನವು ಕಾರಣವಾಗಿರಬಾರದು. ಆದ್ದರಿಂದ ಪ್ಲಾಸ್ಟಿಕ್ ಅನ್ನು ಪ್ರತ್ಯೇಕವಾಗಿ ಶೇಖರಿಸಿ ಬಿಸಾಡುವ ಪದ್ದತಿಯನ್ನು ರೂಢಿಸಿಕೊಳ್ಳಬೇಕು.
೭. ಪ್ಲಾಸ್ಟಿಕ್ ಲೇಪಿತವಿರುವ ಯಾವುದೆ ವಸ್ತುವನ್ನು ಸುಡಬಾರದು. ಇಂದಿನ ದಿನಗಳಲ್ಲಿ ನೀರಿನಾಂಶವಿರುವ ಅಥವಾ vaccum pack ಮಾಡಿ ತಿನ್ನುವ ಪದಾರ್ಥಗಳನ್ನು ಶೇಖರಿಸಲು ಪ್ಲಾಸ್ಟಿಕ್‌ನ ಥೆಳುವಾದ ಲೇಪನವನ್ನು ಕಾಗದದಲ್ಲಿ ತಯಾರಿಸಿದ ಡಬ್ಬಗಳ ಒಳಪದರದಲ್ಲಿ ಬಳಸಿರುತ್ತಾರೆ. ಕಾಗದದ ಡಬ್ಬವೆಂದು ಸುಟ್ಟಾಗ ಒಳಗಿರುವ ಪ್ಲಾಸ್ಟಿಕ್ ಪದರವೂ ಸಹ ಸುಟ್ಟು ಹಾನಿಕಾರಕ ಅನಿಲ ಬಿಡುಗಡೆಯಾಗುತ್ತವೆ.
೮. ಷೇವಿಂಗ್ ಸ್ಟಿಕ್/ರೇಝರ್‌ನ ಬದಲು ಬ್ಲೇಡ್ ಹಾಕಿ ಬಳಸುವ ಷೇವಿಂಗ್ ಸಾಧನವನ್ನು ಬಳಸಬೇಕು. ಬ್ಲೇಡ್ ಮೂಂಡಾದ ಮೇಲೆ ಕೇವಲ ಬ್ಲೇಡ್‌ವೊಂದನ್ನೆ ಬದಲಾಯಿಸಿದರೆ ನಮ್ಮ ಕಾರ್ಯವು ಸಾಧಿಸಿದ ಹಾಗೆ ಆಗುತ್ತದೆ ಮತ್ತೆ ಪರಿಸರ ಕಾಪಾಡುವುದರಲ್ಲಿ ನಮ್ಮ ದಿಟ್ಟ,ಪುಟ್ಟ ಹೆಜ್ಜೆ ಸಫಲವೂ ಆಗುತ್ತದೆ.

ಕೊಸರು:
ನೀವು ನೀರು ಕುಡಿಯುವ ಬಾಟಲ್ ಕೆಳಗೆ ನೋಡಿದಾಗ ಈ ರೀತಿಯಾಗಿ PVC ತ್ರಿಕೊಣದೊಳಗೆ ಯಾವುದಾದರು ಸಂಖ್ಯೆಯನ್ನು ಮುದ್ರಿಸಿದ್ದು ಗಮನಿಸಿದೀರಾ?
ನೋಡಿದ್ದರೆ ಅದು ಏನು ಸೂಚಿಸುತ್ತದೆ ಎಂಬ ಆಲೋಚನೆ ಬಂದಿತ್ತೆ?
ಅಥವಾ ಅದು ಕೇವಲ ಪುನರ್ಸಂಸ್ಕರಿಸಬಹುದೆಂದು ಯೋಚಿಸಿದಿರಾ?ಆ ರೀತಿಯ ಆಲೋಚನೆ ತಪ್ಪು!!!ಆ ಬಾಟಲಿಯ ಪ್ಲಾಸ್ಟಿಕ್‌ ಯಾವ ರಾಸಾಯನಿಕದಿಂದ ತಯಾರಿಸಲಾಗಿದೆ ಎಂದು ಸೂಚಿಸಲು ನಮೂದಿಸಿರುವ ಸಂಖ್ಯೆ ಇದಾಗಿರುತ್ತದೆ.
೧.Polyethylene terephalate (PET)
೨.High density polyethylene (HDPE)
೩.Unplasticised polyvinyl chloride (UPVC) ಅಥವಾ Plasticised polyvinyl chloride (PPVC)
೪.Low density polyethylene (LDPE)
೫.Polypropylene (PP)
೬.Polystyrene (PS) ಅಥವಾ Expandable polystyrene (EPS)
೭.ಇತರೆ, nylon ಹಾಗು acrylicನಿಂದಲೂ ಸಹ ಮಾಡಿರಲಾಗಿರುತ್ತದೆ.
ನಿಮಗೆ ಈ ಮಾಹಿತಿ ಎಲ್ಲೂ ಕಾಣಸಿಗುವುದಿಲ್ಲ ಯಾಕೆಂದರೆ ಬಹುತೇಕ ಪ್ಲಾಸ್ಟಿಕ್ ಹಾಗು ಬಳಸಲಾಗುವ ರಾಸಾಯನಿಕಗಳು ವಿಷಪೂರಿತವಾದವು ಹಾಗು ಆರೋಗ್ಯಕ್ಕೆ ಹಾನಿಕಾರಕ.ಇವು ಆಯಾ ಪ್ಲಾಸ್ಟಿಕ್ ವಸ್ತುಗಳಿಂದ ಅಹಾರ/ಕುಡಿಯುವ ನೀರು/ಪಾನೆಯಗಳಲ್ಲಿ ಸಲೀಸಾಗಿ ಬೆರೆತು ಆರೋಗ್ಯವನ್ನು ಹಾಳು ಮಾಡುತ್ತದೆ.
ಪ್ಲಾಸ್ಟಿಕ್ ಡಬ್ಬಗಳಲ್ಲಿ ಶೇಖರಿಸಿದ ಊಟಮಾಡಿದ ನಂತರ ನಿಮಗೆ ಖಂಡಿತವಾಗಿಯೂ ಊಟದ ರುಚಿ ಜೊತೆ ಪ್ಲಾಸ್ಟಿಕ್‌ನ "ರುಚಿ"ಯ ಅನುಭವ ಸಹ ಆಗುತ್ತದೆ. ಇದು ಯಾಕೆಂದರೆ ನೀವು ನಿಜವಾಗಲೂ ಪ್ಲಾಸ್ಟಿಕ್ ತಿನ್ನುತ್ತಿದ್ದೀರಿ.ಭೂಮಿಯ ಮೇಲೆ ಅಗಾಧವಾದ ಕೆಟ್ಟ ಪರಿಣಾಮ ಬೀರುವ ಪ್ಲಾಸ್ಟಿಕ್ ನಮ್ಮ ದೇಹಾರೋಗ್ಯದ ಮೇಲೆ ಎಂತಹ ಪರಿಣಾಮ ಬೀರಬಹುದೆಂದು ಊಹಿಸಿ.
ಈ ಪಟ್ಟಿಯಲ್ಲಿ ಅತ್ಯಂತ ಕೆಟ್ಟವಾದುದು ೩,೬ ಹಾಗು ೭ ಸಂಖ್ಯೆಯ ರಾಸಾಯನಿಕದಿಂದ ಮಾಡಿರುವ ಪ್ಲಾಸ್ಟಿಕ್.
ನಾವು ಕುಡಿಯುವ ಅಥವಾ ತಿನ್ನುವ ಪದಾರ್ಥಗಳನ್ನು ಶೇಖರಿಸಲು PETಬಾಟಲ್‌ನ ಸಂಖ್ಯೆ ಸೂಚಿಸುವ ೧ ಎಂಬ ಸಂಖ್ಯೆಯಿಂದ ಗುರುತು ಮಾಡಿರುವ ಪ್ಲಾಸ್ಟಿಕ್ ವಸ್ಟುಗಳನ್ನೆ ಬಳಸಿದರೆ ಒಂದು ಹಂತಕ್ಕೆ ನಾವು ಸುರಕ್ಷಿತವಾಗಿರಬಹುದು. ಆದ್ದರಿಂದ ಪ್ಲಾಸ್ಟಿಕ್ ಬಳಸುವಾಗ ಎಚ್ಚರವಾಗಿರಬೇಕು.

ಧನ್ಯವಾದ
ಪ್ರಸಾದ್

No comments: