Tuesday, June 29, 2010

ಥಂಡರ್‌ಬರ್ಡ್ ಎಂಬ ವಂಡರ್‌ಬರ್ಡ್

on May 6, 2009

ಈ ಹಕ್ಕಿಗೆ ಪ್ರಾಣ ಇಲ್ಲ!!! ಈ ಹಕ್ಕಿ ನಿಮ್ಮ ಕರೆಗೆ ಸ್ಪಂದಿಸುವುದಿಲ್ಲಾ!!! ಎಲ್ಲಾ ಹಕ್ಕಿಗಳು ಹಾರಾಡಿ ಕಲರವ ಮಾಡಿದರೆ ಇದು ಅಲ್ಲಾಡದೆ ಇದ್ದಲ್ಲೆ ಇದ್ದು ತಣ್ಣಗೆ ಠಳಾಯಿಸಿರುತ್ತೆ!!!ಆದ್ರು ಸಹ ನಿಮ್ಮ ಆದೇಶವನ್ನು ಮೀರದೆ ವಿಧೇಯನಾಗಿ ಮಿಂಚಿನ ವೇಗದಲ್ಲಿ ಅಂಚೆಗಳನ್ನು ರವಾನಿಸುತ್ತದೆ.ಇದು ಗುಡುಗುವ ಹಕ್ಕಿಯಂತೂ ಅಲ್ಲಾ ಆದರೆ ಹಿಂದಿನ ಕಾಲದಲ್ಲಿ ಅಂಚೆ ರವಾನಿಸಲು ಪಾರಿವಾಳ/ಹದ್ದನ್ನು ಬಳಸಲಾಗುತ್ತಿತ್ತಲ್ಲವೆ ಹಾಗೆಯೆ ಈಗಿನ ಕಾಲದಲ್ಲಿ ನಮ್ಮ ಎಲ್ಲ ಮಿಂಚೆಗಳನ್ನು ಆಫ್‌ಲೈನ್/ಆನ್‌ಲೈನ್ ವೀಕ್ಷಿಸಲು ಅನುಕೂಲ ಮಾಡಿಕೊಡುವ ಸಾಧನ, ಮಿಂಚಿನ ವೇಗದಲ್ಲಿ ಹರಿದಾಡುವ ಅಂಚೆಯೆ-ಮಿಂಚೆ.

ಥಂಡರ್‌ಬರ್ಡ್‌ಅನ್ನು ಉಪಯೋಗಿಸುವ ಪ್ರಯೋಜನವೇನೆಂದರೆ ಹಳೆಯ ಮಿಂಚೆಗಳನ್ನು ನಾವು ಲಾಗ್-ಇನ್ ಆಗದೆಯೆ ನಮಗಿಷ್ಟಬಂದಾಗ ವೀಕ್ಷಿಸಬಹುದು ಆನ್-ಲೈನ್ ಆಗುವ ಪ್ರಮೇಯವೆ ಬರುವುದಿಲ್ಲ.ಇದು ಕಾನ್ಫಿಗರ್ ಮಾಡುವುದು ಸುಲಭ,ಔಟ್‌ಲುಕ್‌ನಂತೆ ಕಷ್ಟವಲ್ಲ,ನಿಮಗೆ ಪುಕ್ಕಟೆಯಾಗಿ ದೊರೆಯುತ್ತದೆ,ಕದ್ದ ತಂತ್ರಾಂಶ ಬಳಸುವ ಅಗತ್ಯವಿಲ್ಲ ಯಾಕಂದ್ರೆ ಔಟ್‌ಲುಕ್‌ ಬಳಸಲು ಮೈಕ್ರೊಸಾಫ್ಟ್‌ನವರ "ಆಫಿಸ್" ತಂತ್ರಾಂಶ ಸ್ಥಾಪಿಸಬೇಕು.ಈ "ಆಫಿಸ್" ತಂತ್ರಾಂಶ ಕೊಳ್ಳಲು, ೨೦೦೭ ಆವೃತ್ತಿ ಕೊಳ್ಳುತ್ತೇನೆಂದರು ಸಹ ಕನಿಷ್ಟ ೩೫೦೦/- ಕಕ್ಕಬೇಕು ರಿಟೈಲ್ ಆವೃತ್ತಿಗಂತು ೨೭೦೦೦/-ಆಗುತ್ತದೆ!!! ಶ್ರೀಸಾಮಾನ್ಯನ ಜೇಬಿಗೆಟುಕುವ ಮೌಲ್ಯವೆ ಇವೆಲ್ಲಾ? ಆದ್ರು ಎನು ಮಾಡ್ತೀರಾ ನಮ್ಮ ದೈನಂದಿನ ಜೀವನ ಮಿಂಚೆಯನ್ನು ನೋಡದೆ ಕಳೆಯುವ ಹಾಗಿರುವುದಿಲ್ಲ ಹಾಗಾಗಿ ಇರುವ ಮೂರು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕಾಗುತ್ತದೆ

೧.ಕದ್ದ ತಂತ್ರಾಂಶ ಉಪಯೋಗಿಸುವುದು
೨.ದುಡ್ಡು ಕೊಟ್ಟು ನಿಮ್ಮ ಸ್ವಂತ ತಂತ್ರಾಂಶ ಕೊಳ್ಳುವುದು.. ಕೊನೆಯದಾಗಿ
೩.commercial ತಂತ್ರಾಂಶದಂತೆಯೆ ಎಲ್ಲಾ ಕಾರ್ಯವನ್ನು ಶಕ್ತವಾಗಿ ನಿಭಾಯಿಸಬಲ್ಲ ಪುಕ್ಕಟೆಯಾಗಿ ದೊರೆಯುವ ತಂತ್ರಾಂಶ ಉಪಯೋಗಿಸುವುದು.
ಥಂಡರ್‌ಬರ್ಡ್ ಸ್ಥಾಪನಾಕಡತವನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು
http://www.mozillamessaging.com/en-US/thunderbird/

ಮಿಂಚೆಯನ್ನು ಕಳುಹಿಸಿಸುವುದಕ್ಕೆ/ಸ್ವೀಕರಿಸುವುದಕ್ಕೆ ವಿಶೇಷ ಜ್ಞಾನದ ಅಗತ್ಯವಿಲ್ಲದೆ ಕೆಲವು ಸರಳವಾದ ಸೆಟ್ಟಿಂಗ್ ಮಾಡುವುದರ ಮೂಲಕ ಥಂಡರ್‌ಬರ್ಡ್‌ಅನ್ನು ಯಶಸ್ವಿಯಾಗಿ ಯಾವುದೆ ತೊಂದರೆಯಿಲ್ಲದೆ ಉಪಯೋಗಿಸಬಹುದು.ಮಿಂಚೆಯನ್ನು ಆಫ್‌ಲೈನ್/ಆನ್‌ಲೈನ್ ವೀಕ್ಷಿಸಲೂ ಬಹುದು!!! ಕಾನ್ಫಿಗರ್ ಮಾಡುವ ಮುನ್ನ ಈ ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆ, ಹೇಗೆಲ್ಲಾ ಇದನ್ನು ನಾವು ಉಪಯೋಗಿಸಿಕೊಳ್ಳಬಹುದು ಎಂಬುದನ್ನು ನೋಡೊಣ.
ಸರಳವಾಗಿ ಹೇಳಬೇಕೆಂದರೆ ಈ ತಂತ್ರಾಂಶವನ್ನು ನಮ್ಮ ಜಿಮೈಲ್/ಯಹೂ ಮಿಂಚೆ ಖಾತೆಗಳಿಗೆ ಲಾಗ್-ಇನ್ ಆಗದೆಯೆ (ನಾವು ಬಳಕೆದಾರನ ಹೆಸರು ಹಾಗು ಗುಪ್ತಪದವನ್ನು ಮೊದಲ ಬಾರಿ ನೀಡಿ ಉಳಿಸಿದ್ದಲ್ಲಿ ಸ್ವಯಂಚಾಲಿತವಾಗಿ ಅದೆ ಲಾಗ್-ಇನ್ ಆಗುತ್ತದೆ, ಪ್ರತಿ ಬಾರಿಯು!!)ನಮ್ಮ ಇನ್‌ಬಾಕ್ಸ್‌ನಲ್ಲಿರುವ ಎಲ್ಲಾ ಮಿಂಚೆಗಳನ್ನು ನಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡುತ್ತದೆ.ನಾವು ಜಿ-ಮೈಲ್/ಯಹೂ/ರಿಡಿಫ್/ಹಾಟ್‌ಮೈಲ್/.. ಇನ್ಯಾವುದೆ ಖಾತೆಯ ಮಿಂಚೆ ವೀಕ್ಷಿಸಬೇಕೆಂದರೆ ಲಾಗ್-ಇನ್ ಆಗಬೇಕು.ನಮಗೆ ಬಂದಿರುವ ಮಿಂಚೆಗಳು ಆಯಾ ವೆಬ್‌ಸೈಟ್‌ನ ಸರ್ವರ್‌ಗಳಲ್ಲಿ ಶೇಖರಿಸಲಾಗಿರುತ್ತದೆ ಹಾಗಾಗಿ ನಾವು ಮಿಂಚೆ ನೋಡುವ ಪ್ರತಿಬಾರಿಯು ವೆಬ್‌ಸೈಟ್‌ಗೆ ಲಾಗ್-ಇನ್ ಆಗಿ ಸರ್ವರ್‌ನಲ್ಲಿರುವುದನ್ನು ನೋಡಬೇಕಾಗುತ್ತದೆ.ಸರ್ವರ್‌ನಲ್ಲಿ ವೀಕ್ಷಿಸಲು ಮಾತ್ರ ಅವಕಾಶವಿರುತ್ತದೆ,ಕೈಗೆ ಬಂದಿದ್ದು ಬಾಯ್ಗೆ ಬರದೆ ಇರೊ ಪರಿಸ್ಥಿತಿ. ಪ್ರತಿ ಬಾರಿ ನೋಡಬೇಕೆಂದಾಗ ಪ್ರತಿ ಬಾರಿಯು ಲಾಗ್-ಇನ್ ಆಗುವ ಅನಿವಾರ್ಯತೆ ಇರುತ್ತದೆ,ಮೇಲಾಗಿ ಹಳೆಯ ಮೈಲ್‌ಗಳನ್ನು ನೋಡಲು ಸಹ ದತ್ತಾಂಶ ಸ್ಥಳಾಂತರಗೊಂಡು(Data Transfer)ಇಂಟರ್ನೆಟ್ ಬಳಕೆಯ ವೆಚ್ಚವು ಹೆಚ್ಚಾಗುತ್ತದೆ!! ಇದೆಲ್ಲದರಿಂದ ತಪ್ಪಿಸಿಕೊಂಡು ಜಾಣತನದಿಂದ ಜೇಬಿಗೂ ಭಾರವಾಗದಂತೆ ಮಿಂಚೆ ನಿರ್ವಹಣೆ ಮಾಡಬೇಕೆಂದರೆ ಥಂಡರ್‌ಬರ್ಡ್ ಉಪಯೋಗಿಸುವುದೆ ಪರಿಹಾರ,ಮೇಲಾಗಿ ಜನ ಚೇಂಜ್ ಕೇಳ್ತಾರೆ,ಆ ಕಾರಣದಿಂದಲು ಉಪಯೋಗಿಸಬಹುದು,ಒಮ್ಮೆ ಪ್ರಯತ್ನಿಸೊಕ್ಕೆ ಆಗಿರೊದೇನು?whose fathers what goes!!! :D.

ತಂತ್ರಾಂಶವನ್ನು ಸ್ಥಾಪಿಸಿದ ನಂತರ ಕೆಲವು ಸರಳವಾದ ಸೆಟ್ಟಿಂ‌ಗ್‌ಗಳು ಮಾಡಬೇಕಾಗಿ ಬರುವುದು,ಇದು ಯಾಕಪ್ಪಾ ಅಂತಂದ್ರೆ ನಾವು ಕಳುಹಿಸುವ ಮಿಂಚೆಗಳು ಉದ್ದೇಶಿತ ವ್ಯಕ್ತಿಯ ಮಿಂಚೆ ವಿಳಾಸಕ್ಕೆ ತಲುಪಬೇಕೆಂದರೆ ಆ ವಿಳಾಸ ಸರ್ವರ್‌ಗೆ ಮೊದಲು ತಲುಪಬೇಕು. ಹಾಗಾಗಿ ಸರ್ವರ್‌ಗೆ ಈ ವಿಳಾಸ ತಲುಪಿಸಲು ಮೊದಲು ಸರ್ವರ್‌ನ ವಿಳಾಸ ನಮೂದಿಸುವುದು ಅನಿವಾರ್ಯ, ಇದೆ ರೀತಿಯಾಗಿ ನಮಗೆ ಉದ್ದೇಶಿತ ಮಿಂಚೆಗಳನ್ನು ಸ್ವೀಕರಿಸಲು ಸರ್ವರ್‌ಗೆ ಬರುವ ಮಿಂಚೆಗಳು ತಲುಪಬೇಕೆಂದರೆ ಅದಕ್ಕು ಸಹ ವಿಳಾಸವನ್ನು ನಮೂದಿಸಬೇಕು,ಇಷ್ಟೆ ಮಾಡ್ಬೇಕಾಗಿರೊದು.ನಾವು ಮಾಡಿದ್ದೇನೆಂದರೆ, ಹೊರ ಹೋಗೊ ಮಿಂಚೆಗಳಿಗೆ ದಾರಿಯಾಗುವಂತೆ ವಿಳಾಸ ಸೂಚಿಸಿದೆವು ಹಾಗೆಯೆ ಒಳಗೆ ಬರುವ ಮಿಂಚೆಗಳನ್ನು ಸ್ವೀಕರಿಸಲು ವಿಳಾಸ ಸೂಚಿಸಿದೆವು,ಇಲ್ಲಿ ವಿಳಾಸ ಮುಖ್ಯ.ಇದು ತಪ್ಪಾಯಿತೆಂದರೆ ಹೊಗಬೇಕಾಗಿರುವ ಮಿಂಚೆ ಹೊಗೊಲ್ಲ ಬರಬೇಕಾಗಿರುವ ಮಿಂಚೆ ಬರೊಲ್ಲ.
ಹ್ಮ್ಮ್.. ವಿಳಾಸ ನಮೂದಿಸಬೇಕು ಅಂತ ಗೊತ್ತಾಯ್ತು ಆದ್ರೆ ಮಿಂಚೆ ಸ್ವೀಕರಿಸೊಕ್ಕೆ ಎರಡು ಬಗೆಯ ಸರ್ವರ್‌ಗಳಿವೆ ಅದ್ರಲ್ಲಿ ಒಂದು PoP ಮತ್ತೊಂದು IMAP, ಇವೆರಡು ಸಹ ಮಿಂಚೆಯನು ಸ್ವೀಕರಿಸಲು ಇರುವ ಸರ್ವರ್‌ನ ಬಗೆಗಳು ಆದ್ರೆ ಇವೆರಡರಲ್ಲಿ IMAP ಎಂಬ ಸರ್ವರ್‌ನ ಸೆಟ್ಟಿಂಗ್ ಮಾಡಿಕೊಳ್ಳುವುದು ಉತ್ತಮ.ಯಾಕಂತ ತಿಳ್ಕೊಳೊಕ್ಕೆ ಈ ಕೊಂಡಿಯಲ್ಲಿನ ಮಾಹಿತಿ ಓದಿ..
http://email.cityu.edu.hk/faq/popimap.htm

ನನಗೆ ತುಂಬಾ ಹಿಡಿಸಿದ ಅಂಶವೆಂದರೆ,ಯಾವುದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಯಾವ ಮಿಂಚೆ ನನಗೆ ಆಫ್-ಲೈನ್ ವೀಕ್ಷಣೆಗೆ ಅನಗತ್ಯವೆಂದು ನಿರ್ಧರಿಸುವ ನಿಯಂತ್ರಣಕೊಡುವ ಸೌಲಭ್ಯ.
PoP ಉಪಯೋಗಿಸಿದರೆ ನಿಮ್ಮ ಇನ್-ಬಾಕ್ಸ್‌ನ ಮಿಂಚೆಯನ್ನೆಲ್ಲವನ್ನು (ಒಂದನ್ನು ಬಿಡದೆ)ಡೌನ್‌ಲೋಡ್ ಮಾಡಲು ಶುರು ಮಾಡುತ್ತದೆ, ಮೊದಲೆ SPAM ಕಾಟ ಇರೋವಾಗ ಅನಗತ್ಯ ಮಿಂಚೆಗಳನ್ನೂ ಸಹ ಡೌನ್‌ಲೋಡ್ ಯಾಕೆ ಮಾಡಬೇಕು?
IMAPನಲ್ಲಿ ಮಿಂಚೆಯು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುವುದಿಲ್ಲ,ಕೇವಲ ಇಂತಹ ಮಿಂಚೆ ಬಂದಿದೆ ಎನ್ನುವುದನ್ನಷ್ಟೆ ಸೂಚಿಸುತ್ತದೆ.ನೀವು ಆ ಮಿಂಚೆಯ ಸಂದೇಶವನ್ನು ಆಫ್-ಲೈನ್ ಓದಬೇಕೆಂದರೆ ಆಗ ಡೌನ್‌ಲೋಡ್ ಮಾಡಬೇಕಾಗುತ್ತದೆ,ಒಮ್ಮೆ ಡೌನ್‌ಲೋಡ್ ಮಾಡಿದ ನಂತರ ಅದು ಹಾಗೆಯೆ ನಿಮ್ಮ ಕಂಪ್ಯೂಟರ್‌ನಲ್ಲಿ ಶಾಶ್ವತವಾಗಿ ಉಳಿಯುತ್ತದೆ.ಇಲ್ಲವಾದ್ರೆ ನೀವು ಆ ಮಿಂಚೆಯನ್ನು ನಿರ್ಲ್ಯಕ್ಷಿಸಿ ಮತ್ತೊಂದು ಮಿಂಚೆಯತ್ತ ಕಣ್ಣು ಹಾಯಿಸಬಹುದು.ಆಫ್-ಲೈನ್ ಇದ್ದಾಗಲು ಸಹ ಡೌನ್‌ಲೋಡ್ ಮಾಡಿ ಆದಮೇಲೆ ಮರು ವೀಕ್ಷಿಸಬಹುದು. ಇಷ್ಟೆಲ್ಲ ಮಾಹಿತಿಯಿಟ್ಟುಕೊಂಡು ಥಂಡರ್‌ಬರ್ಡ್ಅನ್ನು ಜಿಮೈಲ್‌ನ ಇನ್-ಬಾಕ್ಸ್‌ನಿಂದ ಮಿಂಚೆಗಳನ್ನು ಕಂಪ್ಯೂಟರ್‌ನಲ್ಲಿ ಶೇಖರಿಸಲು ಏನು ಮಾಡಬೇಕೆಂದು ನೋಡೋಣ.

ಈ ರೀತಿ ಮಿಂಚೆ ಸಾಧನ ಬಳಸಿ ಮಿಂಚೆಗಳನ್ನು ಆಫ್‌ಲೈನ್ ವೀಕ್ಷಿಸಲು,ನಿಮಗೆ ಮಿಂಚೆ ಸೇವೆ ನೀಡುವವರಿಗೆ ದುಡ್ಡು ತೆತ್ತು ಅವರ ಚಂದಾದಾರರಾಗಬೇಕಾಗುತ್ತದೆ ಆದರೆ ಭಾರತದಲ್ಲಿ ಜಿಮೈಲ್ ಒಂದರಲ್ಲಿ ಮಾತ್ರ ಈ ಸೇವೆ ಉಚಿತ ಹಾಗಾಗಿ ಜಿಮೈಲ್ ಕಾನ್ಫಿಗರ್ ಮಾಡುವುದನ್ನು ನೋಡೋಣ.
ಮೊದಲಿಗೆ ಜಿಮೈಲ್‌ನ ಇನ್‌ಬಾಕ್ಸ್‌ಗೆ ಲಾಗ್-ಇನ್ ಆಗಿ ಅಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ,Forwarding and POP/IMAP ಆಯ್ಕೆ ಮಾಡಿ IMAPಎಂಬುದನ್ನು ಶಕ್ತಗೊಳಿಸಿ,ಬದಲಾವಣೆಗಳನ್ನು ಉಳಿಸಿ.ಲಾಗ್ ಔಟ್ ಆಗಿ..
ಇದಾದ ನಂತರ ಥಂಡರ್‌ಬರ್ಡ್ ಸ್ಥಾಪಿಸಲು ಶುರು ಮಾಡಿ.(ಆನ್-ಲೈನ್ ಆಗುವ ಅವಶ್ಯಕತೆಯಿಲ್ಲ)
ಕಾಣುವ ಎಲ್ಲಾ ಆಯ್ಕೆಗಳಿಗು "ಮುಂದಿನದು"ಎಂಬ ಗುಂಡಿ ಒತ್ತಿ.
೧."ಹೊಸ ಖಾತೆ ಸ್ಥಾಪನೆ"ಎಂಬ ವಿಂಡೊನಲ್ಲಿ "ಮಿಂಚೆ ಖಾತೆ"ಎಂಬುದನ್ನು ಆಯ್ಕೆ ಮಾಡಿ"ಮುಂದಿನದು"ಎಂಬ ಗುಂಡಿ ಒತ್ತಿ.
೨.ಸ್ವವಿವರ ನಮೂದಿಸಬೇಕಾದ "ಗುರುತು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ಹಾಗು ಮಿಂಚೆ ವಿಳಾಸ ನಮೂದಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೩."ಸರ್ವರ್‌ ಮಾಹಿತಿ"ಎಂಬ ವಿಂಡೊನಲ್ಲಿ ಮೊದಲು IMAP ಎನ್ನುವುದನ್ನು ಆಯ್ಕೆ ಮಾಡಿ ನಂತರ ಒಳಹರಿವನ್ನು ನಿಭಾಯಿಸುವ ಸರ್ವರ್‌ನ ಹೆಸರನ್ನು imap.gmail.com ಎಂದು ನಮೂದಿಸಿ.
೨.ಅದೆ ವಿಂಡೊವಿನಲ್ಲಿ ಹೊರಹರಿವನ್ನು ನಿಭಾಯಿಸುವ ಸರ್ವರ್‌ನ ಹೆಸರನ್ನು smtp.gmail.com ಎಂದು ನಮೂದಿಸಿ "ಮುಂದಿನದು"ಎಂಬ ಗುಂಡಿ ಒತ್ತಿ.
೪."ಬಳಕೆದಾರನ ಹೆಸರುಗಳು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ನಮೂದಿಸಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೫.ಕೊನೆಯದಾಗಿ "ಖಾತೆಯ ಹೆಸರು"ಎಂಬ ವಿಂಡೊನಲ್ಲಿ ಈ ಖಾತೆಗೆ ಹೆಸರೊಂದನ್ನು ಸೂಚಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ ಮುಗಿಸಿ.
ಇಷ್ಟು ಮಾಡಿದಾಗ,ನೀವು ಸೂಚಿಸಿದಂತೆ ನೀವಿಟ್ಟ ಹೆಸರಿನೊಂದಿಗೆ ನಿಮ್ಮ ಹೊಸ ಖಾತೆಯು ಸೃಷ್ಟಿಯಾಗಿದ್ದನ್ನು "ಖಾತೆ ಸೆಟ್ಟಿಂಗ್‌ಗಳು"ಎಂದು ಕಾಣುವ ವಿಂಡೊನ ಎಡಭಾಗದಲ್ಲಿ ನೋಡಬಹುದು.
ಇದೆ ರೀತಿಯಾಗಿ ಮತ್ತೊಂದು ಜಿ-ಮೈಲ್ ಖಾತೆಯ ಮಿಂಚೆಗಳನ್ನು ಸಹ ವೀಕ್ಷಿಸಲು ಹೊಸ ಖಾತೆಯನ್ನು ಸೃಷ್ಟಿಸಬಹುದು.ಮತ್ತೊಂದು ಖಾತೆಯನ್ನು ಸೇರಿಸಲು...

೧.ಸಾಧನ->ಖಾತೆಯ ಸೆಟ್ಟಿಂಗ್‌ಗಳು ಇದನ್ನು ಕ್ಲಿಕ್ಕಿಸಿ.
೨.ಎಡ ಭಾಗದಲ್ಲಿ ಕಾಣುವ "ಖಾತೆ ಸೇರಿಸಿ"ಎನ್ನುವ ಗುಂಡಿಯನ್ನು ಒತ್ತಿ.
೩."ಖಾತೆ ಜಾದುಗಾರ"ಎಂಬುದು ಶುರುವಾಗಿ ಖಾತೆಯ ಸೆಟ್ಟಿಂಗ್‌ಗಳು ಎಂಬ ವಿಂಡೊ ಪುಟಿಯುತ್ತದೆ.
೪.ಈ ವಿಂಡೊನಲ್ಲಿ "ಮಿಂಚೆ ಖಾತೆ"ಎನ್ನುವುದನ್ನು ಆಯ್ಕೆ ಮಾಡಿ"ಮುಂದಿನದು"ಎಂಬ ಗುಂಡಿ ಒತ್ತಿ.
೫.ಸ್ವವಿವರ ನಮೂದಿಸಬೇಕಾದ "ಗುರುತು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ಹಾಗು ಮಿಂಚೆ ವಿಳಾಸ ನಮೂದಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೬."ಸರ್ವರ್‌ ಮಾಹಿತಿ"ಎಂಬ ವಿಂಡೊನಲ್ಲಿ ಮೊದಲು IMAP ಎನ್ನುವುದನ್ನು ಆಯ್ಕೆ ಮಾಡಿ ನಂತರ ಒಳಹರಿವನ್ನು ನಿಭಾಯಿಸುವ ಸರ್ವರ್‌ನ ಹೆಸರನ್ನು imap.gmail.com ಎಂದು ನಮೂದಿಸಿ.
೭.Use Global Inbox ಎಂಬುದನ್ನು ಟಿಕ್ ಮಾಡಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೮."ಬಳಕೆದಾರನ ಹೆಸರುಗಳು"ಎಂಬ ವಿಂಡೊನಲ್ಲಿ ನಿಮ್ಮ ಹೆಸರು ನಮೂದಿಸಿದ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ.
೯.ಕೊನೆಯದಾಗಿ "ಖಾತೆಯ ಹೆಸರು"ಎಂಬ ವಿಂಡೊನಲ್ಲಿ ಈ ಖಾತೆಗೆ ಹೆಸರೊಂದನ್ನು ಸೂಚಿಸಿ ನಂತರ "ಮುಂದಿನದು"ಎಂಬ ಗುಂಡಿ ಒತ್ತಿ ಮುಗಿಸಿ.
೧೦.ಈಗ ನಿಮಗೆ ಇಲ್ಲಿಯವರೆಗು ತುಂಬಿಸಿದ ಮಾಹಿತಿ "ಶುಭಾಶಯ"ಎನ್ನುವ ವಿಂಡೊನಲ್ಲಿ ಕಂಡು ಬರುತ್ತದೆ, ಯಾವುದಾದರು ಮಾಹಿತಿಯನ್ನು ಬದಲಾಯಿಸಬೇಕೆಂದಲ್ಲಿ "ಹಿಂದಿನದು"ಎಂಬ ಗುಂಡಿಯನ್ನು ಒತ್ತಿ ಬದಲಾಯಿಸಬಹುದು. ಮಾಹಿತಿ ಪರಿಶೀಲಿಸಿಯಾದ ಮೇಲೆ "ಮುಗಿಸು"ಎಂಬ ಗುಂಡಿ ಒತ್ತಿ.

ಈಗ ಕಾಣುವ "ಖಾತೆ ಸೆಟ್ಟಿಂಗ್"ಎನ್ನುವ ವಿಂಡೊನಲ್ಲಿ ಸೇರಿಸಿದ ಖಾತೆಯ ವಿವರಗಳನ್ನು ಕಾಣಬಹುದು.ಇತರೆ ಸೆಟ್ಟಿಂಗ್ ಮಾಡಲು..
೧.ವಿಂಡೊನ ಎಡಭಾಗದಲ್ಲಿ ಕಾಣುವ "ಸರ್ವರ್ ಸೆಟ್ಟಿಂಗ್" ಎಂಬುದರ ಮೇಲೆ ಒಮ್ಮೆ ಕ್ಲಿಕ್ ಮಾಡಿ.
೨.ಬಲ ಭಾಗದಲ್ಲಿ ನಿಮಗೆ "ಖಾತೆ ಸೆಟ್ಟಿಂಗ್"ನ ಸಂಪೂರ್ಣ ಮಾಹಿತಿ ಕಾಣಸಿಗುತ್ತದೆ.ಇದರಲ್ಲಿ "ಸರ್ವರ್ ಹೆಸರು" ಎಂಬ ಬಾಕ್ಸ್ ಪಕ್ಕ "ಪೋರ್ಟ್" ಎಂಬುದರಲ್ಲಿ ಮೂಲಭೂತವಾದ ಯಾವುದೆ ಸಂಖ್ಯೆಯಿದ್ದಲ್ಲಿ ಅದನ್ನು ಅಳಿಸಿ ೯೯೩ ಎಂದು ನಮೂದಿಸಿ.
೩.ಕೆಳಗೆ ಕಾಣುವ "ರಕ್ಷಣೆಯ ಸೆಟ್ಟಿಂಗ್"ಎಂಬುದರಲ್ಲಿ SSL ಎಂಬುದನ್ನು ಆಯ್ಕೆ ಮಾಡಿ.
೪."ಸರ್ವರ್ ಸೆಟ್ಟಿಂಗ್‌ಗಳು" ಎಂಬುದರಲ್ಲಿ,ಹೊಸ ಮಿಂಚೆಗೋಸ್ಕರ ಮೊದಲ ಬಾರಿಗೆ ಶುರುವಾದ ನಂತರ ಹುಡುಕುವ ಆಯ್ಕೆಯನ್ನು ಟಿಕ್ ಮಾಡಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಸ ಮಿಂಚೆಗೋಸ್ಕರ ಹುಡುಕುವ ಸಮಯವನ್ನು ನಿಗದಿ ಪಡಿಸಿ ಮಿಕ್ಕ ಆಯ್ಕೆಗಳನ್ನು ಹಾಗೆಯೆ ಬಿಟ್ಟುಬಿಡಿ.
೫.ಇದಾದ ನಂತರ ಎಡಭಾಗದಲ್ಲಿ "ರಚಿಸುವುದು ಹಾಗು ಉತ್ತರಿಸುವ ಬಗೆ"ಏಂಬುದರ ಮೇಲೆ ಕ್ಲಿಕ್ ಮಾಡಿ.
ರಚಿಸುವ/ಉತ್ತರಿಸುವ ಸಂದೇಶಗಳು HTMLನಲ್ಲಿರಬೇಕೆ ಅಥವಾ ಸರಳವಾದ ಅಕ್ಷರ ರೀತಿಯದ್ದಾಗಿರಬೇಕೆ ಎಂಬುದನ್ನು ನಿರ್ಧರಿಸಿ.
HTML - ೧.ಈ ರೀತಿಯದ್ದು ಹೆಚ್ಚು ದತ್ತಾಂಶವನ್ನು ಹಿಡಿದುಕೊಂಡಿರುತ್ತದೆ (ಹೆಚ್ಚಿನ ದತ್ತಂಶ ಹೆಚ್ಚಿನ ದುಡ್ಡು :))
೨.ನಿಧಾನವಾದ ಇಂಟರ್ನೆಟ್ ಸಂಪರ್ಕಗಳಿಗೆ ಸೂಕ್ತವಲ್ಲ.
೩.ಮಿಂಚೆಗಳನ್ನು ಸುಂದರವಾಗಿ ರಚಿಸಬಹುದು.
ಸರಳಾಕ್ಷರ-೧.ಸಂದೇಶಕ್ಕೆ ಸಂಬಂಧಪಟ್ಟದ್ದನ್ನು ಬಿಟ್ಟು ಬೇರೇನು ದತ್ತಾಂಶವನ್ನು ಹೊಂದಿರುವುದಿಲ್ಲ (ಕಮ್ಮಿ ದತ್ತಾಂಶ ಕಮ್ಮಿ ದುಡ್ಡು :))
೨.ನಿಧಾನವಾದ ಇಂಟರ್ನೆಟ್ ಸಂಪರ್ಕಗಳಿಗೆ ಉಪಯುಕ್ತ.
೩.ಮಿಂಚೆಗಳು ನೋಟ್‌ಪ್ಯಾಡ್ ಕಡತದಂತೆ ಅಲಂಕಾರವಿಲ್ಲದೆ ಕಾಣುತ್ತದೆ.

ಸಂದೇಶಗಳನ್ನು ರಚಿಸಲು HTMLಬೇಕೆನಿಸಿದಲ್ಲಿ "ಸಂದೇಶಗಳನ್ನು HTMLನಲ್ಲಿ ರಚಿಸು" ಎಂಬುದನ್ನು ಟಿಕ್ ಮಾಡಿ(ಮೊದಲಿಗೆಯೆ ಆಗಿರುತ್ತದೆ) HTMLಬೇಡದೆ ಇದ್ದಲ್ಲಿ ಆ ಟಿಕ್‌ಅನ್ನು ತೆಗೆದು ಬಿಡಿ. ಉತ್ತರಿಸುವಾಗ ಹಿಂದಿನ ಸಂದೇಶವನ್ನು,ರಚಿಸುತ್ತಿರುವ ಮಿಂಚೆಯ ಸಂದೇಶದ ಕೆಳಭಾಗದಲ್ಲಿ ಅಥವಾ ಮೇಲ್‌ಭಾಗದಲ್ಲಿ ಸ್ವಯಂಉಲ್ಲೇಖ ಮಾಡಬೇಕೆ ಎಂಬುದನ್ನು ನಿರ್ಧರಿಸಿ."ಪ್ರತ್ಯುತ್ತರವನ್ನು ಸಂದೇಶದ ಮೇಲ್‌ಭಾಗದಲ್ಲಿ ಶುರುಮಾಡು" ಎನ್ನುವುದನ್ನು ಆಯ್ಕೆ ಮಾಡಿ ಅಥವಾ ಹಿಂದಿನ ಸಂದೇಶಗಳಿಗೆ ಉತ್ತರಿಸುವಾಗ ಹಳೆಯ ಸಂದೇಶವು ಬೇಡದೆ ಇದ್ದಲ್ಲಿ ಈ ಆಯ್ಕೆಯ ಟಿಕ್ ಗುರುತನ್ನು ತೆಗೆಯಿರಿ.
೬."ಜಂಕ್ ಸೆಟ್ಟಿಂಗ್‌ಗಳು"ಎಂಬುದರಲ್ಲಿ, ಹೊಂದುಕೊಳ್ಳುವಂತಹ ಜಂಕ್ ಮಿಂಚೆ ನಿಯಂತ್ರಣಗಳನ್ನು ಶಕ್ತಗೊಳಿಸು ಎನ್ನುವುದರ ಟಿಕ್ ಗುರುತನ್ನು ತೆಗೆಯಿರಿ.
ಇಷ್ಟೆಲ್ಲಾ ಮಾಡಿದ ನಂತರ, ಅದೆ ವಿಂಡೊನ ಎಡ ಭಾಗದಲ್ಲಿ ಕಾಣುವ ಹೊರಹರಿವಿನ ಸರ್ವರ್(SMTP)ಎಂಬುದರ ಮೇಲೆ ಒಮ್ಮೆ ಕ್ಲಿಕ್ ಮಾಡಿ.
೧.ನೀವು ಮೊದಲೆ ತಿಳಿಸಿದ "ಹೊರಹರಿವಿನ ಸರ್ವರ್"ಪಟ್ಟಿಯಾಗಿರುತ್ತದೆ. ಈಗ ಅದನ್ನು ಆಯ್ಕೆ ಮಾಡಿ(ಒಂದಕ್ಕಿಂತಾ ಹೆಚ್ಚಿದಲ್ಲಿ)"ಸಂಕಲಿಸು" ಎಂಬ ಗುಂಡಿಯನ್ನು ಒತ್ತಿರಿ.
೨.SMTPಸರ್ವರ್ ಎಂಬ ವಿಂಡೊ ಪುಟಿಯುತ್ತದೆ, ಅದರೊಳಗೆ "ಸುರಕ್ಷಿತವಾದ ಸಂಪರ್ಕವನ್ನು ಬಳಸು" ಎಂಬ ಆಯ್ಕೆಯಲ್ಲಿ TLS ಎಂಬುದನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. ಬೇರೆ ಆಯ್ಕೆಗಳನ್ನು ಬದಲಾಯಿಸಬೇಡಿ. ನಂತರ "ಸರಿ"ಎಂಬ ಗುಂಡಿಯನ್ನು ಒತ್ತಿರಿ.
ಈಗ "ಖಾತೆ ಸೆಟ್ಟಿಂಗ್‌ಗಳು" ಎಂಬ ವಿಂಡೊನಲ್ಲಿರುವ "ಸರಿ"ಎಂಬ ಗುಂಡಿಯನ್ನು ಒತ್ತಿದರೆ ಕಥೆ ಮುಗಿದಂತೆ ನೀವು ಥಂಡರ್‌ಬರ್ಡ್‌ಅನ್ನು ತಡೆಯಿಲ್ಲದೆ ಬಳಸಬಹುದು.
ಥಂಡರ್‌ಬರ್ಡ್‌ಅನ್ನು ಒಮ್ಮೆ ಮುಚ್ಚಿ ಆನಂತರ ಪುನ: ಶುರು ಮಾಡಿರಿ. ಶುರುಮಾಡಿದಾಕ್ಷಣ ಅದು ನಿಮಗೆ ಎರಡು ಆಯ್ಕೆಯನ್ನು ಕೊಡುತ್ತದೆ
೧.ಆನ್-ಲೈನ್ ಆಗಿ ಕೆಲಸ ಮಾಡುವುದು
೨.ಆಫ್-ಲೈನ್ ಆಗಿ ಕೆಲಸ ಮಾಡುವುದು

ಮೊದಲನೆಯ ಆಯ್ಕೆ:ಆನ್-ಲೈನ್ ಆಗಿ ಕೆಲಸ ಮಾಡುವುದು
ಈ ಆಯ್ಕೆಯನ್ನು ಮಾಡಿ ಥಂಡರ್‌ಬರ್ಡ್‌ ಶುರು ಮಾಡಿದೊಡನೆಯೆ ಥಂಡರ್‌ಬರ್ಡ್‌ ನಿಮ್ಮ ಜಿಮೈಲ್ ಖಾತೆಯನ್ನು ಸಂಪರ್ಕಿಸುತ್ತದೆ.ಸಂಪರ್ಕ ಸೃಷ್ಟಿಯಾದ ಮೇಲೆ ಬಳಕೆದಾರನ ಹೆಸರಿನ ಗುಪ್ತಪದವನ್ನು ನಮೂದಿಸಬೇಕಾಗುತ್ತದೆ.ಗುಪ್ತಪದವನ್ನು ಕಂಪ್ಯೂಟರನಲ್ಲಿ ಶೇಖರಿಸದಿರುವುದೆ ಲೇಸು.ಮೊದಲಿಗೆ ನಿಮ್ಮ ಜಿಮೈಲ್‌ನಲ್ಲಿರುವ ಎಲ್ಲಾ ಫೋಲ್ಡರ್‌ಗಳು ಒಂದಾದ ಮೇಲೊಂದರಂತೆ ಥಂಡರ್‌ಬರ್ಡ್‌ನ ಇನ್-ಬಾಕ್ಸ್‌ನಲ್ಲಿ ನಕಲುಗೊಳ್ಳುತ್ತವೆ.ಫೋಲ್ಡರ್‌ಗಳು ಸೃಷ್ಟಿಯಾದ ನಂತರ ಎಲ್ಲಾ ಮಿಂಚಿಗಳು ನಕಲಾಗುತ್ತವೆ ಆದರೆ ಯಾವುದು ಒಂದು ಮಿಂಚೆ ಸಹ ನಿಮ್ಮ ಕಂಪ್ಯೂಟರ್‌ನಲ್ಲಿ ಶೇಖರಿಸಲಾಗಿರುವುದಿಲ್ಲ.ಆನ್-ಲೈನ್ ಇದ್ದು ಕೊಂಡು ಮಾಡುವ ಎಲ್ಲಾ ಕಾರ್ಯಗಳು ಜಿಮೈಲ್‌ನ ಮಿಂಚೆ ಖಾತೆಗೆ ಲಾಗ್-ಇನ್ ಆಗಿ ಮಾಡಿದಂತೆಯೆ ಆಗಿರುತ್ತದೆ.ಒಮ್ಮೆ ನೀವು ಆಫ್-ಲೈನ್ ಆದರೆ ಕಂಡು ಬರುವ ಎಲ್ಲಾ ಸಂದೇಶಗಳ ಮಾಹಿತಿ ಮಾಯವಾಗುತ್ತದೆ (ಡೌನ್‌ಲೋಡ್ ಮಾಡದೆ ಇದ್ದವು ಮಾತ್ರ).ನಿಮಗೆ ಬೇಕಾಗಿರುವ ಮಿಂಚೆಯನ್ನು ಅಂತರ್ಜಾಲ ಸಂಪರ್ಕವಿಲ್ಲದಾಗಲು ನೋಡಬೇಕೆಂದರೆ ಡೌನ್‌ಲೋಡ್ ಮಾಡಬೇಕು.ಇದಕ್ಕಾಗಿ ನೀವು ಮೊದಲು ctrlಗುಂಡಿಯನ್ನು ಒತ್ತಿಹಿಡಿದು ನಿಮಗಿಷ್ಟಬಂದ ಮಿಂಚೆಗಳ ಮೇಲೆ ಒಮ್ಮೆ ಕ್ಲಿಕ್ಕಿಸುತ್ತಾ ಆಯ್ಕೆ ಮಾಡಬೇಕು.ನಂತರ ಕಡತ ಮೆನ್ಯುಗೆ ಹೋಗಿ ಅಲ್ಲಿ ಅಫ್-ಲೈನ್ ಎಂಬುದನ್ನು ಕ್ಲಿಕ್ಕಿಸಿದಾಗ ಪುಟಿಯುವ ಆಯ್ಕೆಪಟ್ಟಿಯಲ್ಲಿ ಕೊನೆಯದಾಗಿರುವ "ಆಯ್ಕೆ ಮಾಡಿದ ಸಂದೇಶಗಳನ್ನು ಪಡೆ"ಎಂಬುದನ್ನು ಕ್ಲಿಕ್ಕಿಸಿ.ಆಗ ಆಯ್ಕೆ ಮಾಡಲಾದ ಮಿಂಚೆಗಳನ್ನು ಆಫ್-ಲೈನ್ ವೀಕ್ಷಣೆಗಾಗಿ ಕಂಪ್ಯೂಟರ್‌ನಲ್ಲಿ ಶೇಖರಿಸಲಾಗುತ್ತದೆ.
ಥಂಡರ್‌ಬರ್ಡ್‌ನ ಇನ್-ಬಾಕ್ಸ್‌ನ ಮೊಲ ವಿಂಡೊನ ಮೇಲ್ಭಾಗದಲ್ಲಿ ಕಾಣುವ "ಮಿಂಚೆಯನ್ನು ಪಡೆ"ಎನ್ನುವ ಗುಂಡಿ ಒತ್ತಿದರೆ,ಥಂಡರ್‌ಬರ್ಡ್‌ ನಿಮ್ಮ ಜಿಮೈಲ್ ಖಾತೆಯನ್ನು ಸಂಪರ್ಕಿಸಿ ಓದದಿರುವ(ಬೇಕಾಗಿರೊದು ಬೇಡದೆ ಇರೊ ಎಲ್ಲಾ)ಮಿಂಚೆಗಳನ್ನು ಡೌನ್‌ಲೋಡ್ ಅನಗತ್ಯವಾಗಿ ಮಾಡುತ್ತದೆ. ಹಾಗಾಗಿ ಮೊದಲು ಆನ್-ಲೈನ್ ಆಗಿ, ಯಾವ ಯಾವ ಮಿಂಚೆ ಬಂದಿದೆ ಎಂದು ವೀಕ್ಷಿಸಿ, ಬೇಡದೆ ಇರುವ ಮಿಂಚೆಗಳನ್ನು ಅಳಿಸಿ(ಒಮ್ಮೆ ಅಳಿಸಿದ ನಂತರ ಅವು ಮತ್ತೆ ಕಾಣಬರುವುದಿಲ್ಲ)ಬೇಕಾಗಿರುವ ಮಿಂಚೆಗಳಲ್ಲಿ ಯಾವುದನ್ನು ಆಫ್-ಲೈನ್ ವೀಕ್ಷಣೆಗೆ ಶೇಖರಿಸಬೇಕೆಂದು ಗುರುತಿಸಿ ಅಂಥಹವನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಿ ಮಿಕ್ಕವನು ಹಾಗೆಯೆ ಬಿಡಿ,ಇವುಗಳು ಆಫ್-ಲೈನ್‌ ಆಗಿದ್ದಾಗ ಕಂಡುಬರುವುದಿಲ್ಲ.

ಎರಡನೆಯ ಆಯ್ಕೆ:ಆಫ್-ಲೈನ್ ಆಗಿ ಕೆಲಸ ಮಾಡುವುದು
ಈ ಆಯ್ಕೆಯಲ್ಲಿ ನೀವು ಆನ್-ಲೈನ್ ಆಗಿದ್ದಾಗ ಡೌನ್‌ಲೋಡ್ ಮಾಡಿ ಉಳಿಸಿದಂತಹ ಮಿಂಚೆಗಳನ್ನು ಮಾತ್ರ ವೀಕ್ಷಿಸಲು ಉಪಯುಕ್ತ!!.
ಥಂಡರ್‌ಬರ್ಡ್‌‌ನ ಮೆನ್ಯುವಿನಲ್ಲಿ ಕಡತ->ಆಫ್-ಲೈನ್ ಇಲ್ಲಿಗೆ ಹೋಗಿ ಆಫ್-ಲೈನ್ ಸೆಟ್ಟಿಂಗ್‌ ಎಂಬುದನ್ನು ಕ್ಲಿಕ್ಕಿಸಿ.
ಇಲ್ಲಿ ಆಫ್-ಲೈನ್ ಎನ್ನುವ ವಿಭಾಗದಲ್ಲಿರುವ ಎರಡೂ ಚೆಕ್ ಬಾಕ್ಸ್‌ನಲ್ಲಿ ಟಿಕ್ ಮಾಡಿ ಗುರುತಿ ಮಾಡಿ ನಂತರ ಸರಿ ಎನ್ನುವುದನ್ನು ಕ್ಲಿಕ್ಕಿಸಿ,ವಿಂಡೊ ತಾನಾಗಿಯೆ ಮುಚ್ಚಿಕೊಳ್ಳುತ್ತದೆ.
ಆಫ್-ಲೈನ್ ಆದಾಗ ಎರಡು ಕೆಲಸ ಮಾಡಲು ಸಾಧ್ಯ,ಒಂದು ಹೊಸ ಮಿಂಚೆಗಳನ್ನು ರಚಿಸಬಹುದು ಮತ್ತೊಂದು ಆಫ್-ಲೈನ್ ಸಂದೇಶ ಓದಬಹುದು.ಹೊಸದಾಗಿ ರಚಿಸಿದ ಮಿಂಚೆಯನ್ನು "ಡ್ರಾಫ್ಟ್"ಆಗಿ ಉಳಿಸಿಕೊಂಡು ಆನ್-ಲೈನ್ ಆದ ಮರುಕ್ಷಣವೆ ಕಳುಹಿಸಿ ಆಫ್-ಲೈನ್ ಆಗಿ ಜಿಪುಣತನವನ್ನು ಮೆರೆಯಬಹುದು :D ಏಕೆಂದರೆ ಆನ್-ಲೈನ್ ಆಗಿದ್ದುಕೊಂಡು ಸಂದೇಶವನ್ನು ರಚಿಸಲು ತುಂಬಾ ಸಮಯ ಹಿಡಿಯುತ್ತದೆ,ಹೀಗಿದ್ದಾಗ ದತ್ತಾಂಶವು ಸ್ಥಳಾಂತರಗೊಂಡು ಅನವಶ್ಯಕವಾಗಿ ಅಮೂಲ್ಯವಾದ ಅಂತರ್ಜಾಲ ಸಮಯ/"ಖರ್ಚಾಗುವ ದತ್ತಾಂಶ"ವನ್ನು ವ್ಯಯವಾಗದಂತೆ ತಡೆಗಟ್ಟಬಹುದು.
ಒಟ್ಟಿನಲ್ಲಿ ಥಂಡರ್‌ಬರ್ಡ್‌ನೊಂದಿಗೆ ಜಿ-ಮೈಲ್ ಖಾತೆಯ ಮಿಂಚೆ ನಿರ್ವಹಣೆಯನ್ನು ಯೆಂಜಾಯಿಸಬಹುದು :).

ವಿ.ಸೂ:ನೀವು ಬಳಸುವ ಕಂಪ್ಯೂಟರ್ನಲ್ಲಿ ನಿಮ್ಮದು ಅಂತಾನೆ ಪ್ರತ್ಯೇಕ ಲಾಗ್-ಇನ್ ಇದ್ದಲ್ಲಿ ನಿಮ್ಮ ಮಿಂಚೆಗಳ ಗೌಪ್ಯತೆ ಕಾಪಾಡಬಹುದು.ಕಂಪ್ಯೂಟರ್ ಬಳಸುವ ಎಲ್ಲರೂ ಸಹ ಒಂದೆ ಲಾಗ್-ಇನ್ ಬಳಸಿದಲ್ಲಿ ನಿಮ್ಮ ಮಿಂಚೆಗಳ ಗೌಪ್ಯತೆ ಹರಾಜಾಗಿ ಹೋಗುತ್ತೆ. ಹುಷಾರು!!!

ಇನ್ನು ತಡ ಯಾಕೆ ಹಕ್ಕಿಯನ್ನು ಗುಡುಗಿಸಿ :)

ಸಾಧನ - tool
ಮಿಂಚೆ - email
ತಂತ್ರಾಂಶ - software
ಸ್ಥಾಪನಾಕಡತ - setup file
ಬಳಕೆದಾರನ ಹೆಸರು-user name
ಗುಪ್ತಪದ-password
ಮಿಂಚೆ ವಿಳಾಸ-email id
ಮಿಂಚೆ ಸಾಧನ -email client
ಶಕ್ತಗೊಳಿಸಿ-enable
ಮುಂದಿನದು-next
ಗುಂಡಿ-button
ಹೊಸ ಖಾತೆ ಸ್ಥಾಪನೆ-new account setup
ಮಿಂಚೆ ಖಾತೆ -email account
ಗುರುತು-identity
ಸರ್ವರ್‌ ಮಾಹಿತಿ-server information
ಒಳಹರಿವು-incoming
ಹೊರಹರಿವು-outgoing
ಬಳಕೆದಾರನ ಹೆಸರುಗಳು-usernames
ಖಾತೆಯ ಹೆಸರು-account name
ಖಾತೆ ಸೆಟ್ಟಿಂಗ್‌ಗಳು-account settings
ಖಾತೆ ಸೇರಿಸಿ-add account
ಖಾತೆ ಜಾದುಗಾರ-account wizard
ಹಿಂದಿನದು-back
ಮೂಲಭೂತವಾದ-default
ರಕ್ಷಣೆಯ ಸೆಟ್ಟಿಂಗ್-security setting
ಸರಳಾಕ್ಷರ-plain text
ದತ್ತಾಂಶ-Data
ಹೊಂದುಕೊಳ್ಳುವಂತಹ -adapative
ನಿಯಂತ್ರಣ-controls
ಸುರಕ್ಷಿತವಾದ ಸಂಪರ್ಕವನ್ನು ಬಳಸು-use secure connection
ನಕಲು-copy
ಆಯ್ಕೆ ಮಾಡಿದ ಸಂದೇಶಗಳನ್ನು ಪಡೆ-get selected messages

--ಪ್ರಸಾದ್

No comments: