Tuesday, June 29, 2010

ಅಳುತ್ತಿರುವ ನಿಮ್ಮ ವಿಂಡೊಸ್‌ ಕಂಪ್ಯೂಟರ್ಅನ್ನು ಟ್ವೀಕಿಸಿ, ಚುರುಕುಗೊಳಿಸಿ...ಭಾಗ ೧

on April 20, 2009

ಲಿನಕ್ಸ್ ಇಂದಿನ ಪೀಳಿಗೆಯ OS ಆಗಿದ್ರು ಸಹ ಲಿನಕ್ಸ್‌ಗೆ ಹೊಂದಿಕೊಳ್ಳುವವರೆಗು ವಿಂಡೊಸ್‌ ಜೊತೆ ಗುದ್ದಾಡದೆ ಗತ್ಯಂತರವಿಲ್ಲ.
ವಿಂಡೊಸ್‌ ಕಂಪ್ಯೂಟರ್ ಗಳ ದೊಡ್ಡ ತಲೆನೋವ್ವುಗಳೇನೆಂದರೆ
೧. ಶುರು ಮಾಡಿದಾಗ ಬೀಪ್ ಅಂತ ಶಬ್ದ ಮಾಡಿದ ಮೇಲು ನಿಧಾನವಾಗಿ (೫-೧೦ ನಿಮಿಷದ ನಂತರ) ಗಣಕ ತೆರೆ ಕಂಡು ಬರುವುದು.
೨. ಷಟ್ ಡೌನ್ ಮಾಡಿದಾಗಲು ಸಹ ಕಾರ್ಯ ಸ್ಥಗಿತವಾಗುವುದಕ್ಕೆ ೫-೧೦ ನಿಮಿಷ ತೆಗೆದುಕೊಳ್ಳುವುದು, ಕೆಲವು ಕಂಪ್ಯೂಟರ್ ಗಳು ೧೫ ನಿಮಿಷ ತೆಗೆದುಕೊಳ್ಳುವುದು ಉಂಟು.
೩. ಮೌಸ್ ಬಲ-ಕ್ಲಿಕ್ ಮಾಡಿದಾಗ ಆಗಲಿ ಅಥ್ವಾ ಯಾವುದೆ ಕೆಲಸ ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಾಗಲಿ.
೪. ಯಾವುದಾದ್ರು ವರ್ಡ್ ಕಡತ ತೆರೆಯಲು ನಿಧಾನವಾಗುವುದು.
೫. ಪ್ರೋಗ್ರಾಂಗಳು ಶುರು ಆಗುವುದು ನಿಧಾನವಾಗುವುದಾಗಲಿ.
೬. ಹುಡುಕುವಾಗ ಫಲಿತಾಂಶಗಳು ನಿಧಾನವಾಗಿ ಕಾಣುವುದಾಗಲಿ..

ಮುಂತಾದ ಅನೇಕ ಸಮಸ್ಯೆಗಳು ನಿಮ್ಮ ಸಹನೆಯನ್ನು ಪರೀಕ್ಷಿಸಿದರೆ ವಿಂಡೊಸ್‌ನಲ್ಲಿ ಕೆಲವು ಚಿಕ್ಕ ಪುಟ್ಟ ಟ್ವೀಕ್ ಮಾಡಿದರೆ, ವಿಂಡೋಸ್ ಚೂಟಿಯಾಗುವುದರಲಿ ಸಂಶಯವಿಲ್ಲ.

ವಿ.ಸೂ: ಇಲ್ಲಿ ತಿಳಿಸಿರುವುದಷ್ಟೆ ಮಾಡಿ, ಗಣೇಶನ್ನ ಮಾಡು ಅಂದ್ರೆ ಅವರಪ್ಪನ್ನ ಮಾಡ್ತೀನಿ ಅಂದು ಏನೋ ಮಾಡಿ ಏನೋ ಆದರೆ ನಾನು ಜವಾಬ್ದಾರನಲ್ಲ :), ಹುಷಾರು.
ಆದ್ರೆ ನಿಮ್ಮ ವಿಂಡೊಸ್ ಕಂಪ್ಯೂಟರ್ ಯಾವ ಲೆವೆಲ್ ಗೆ ಹಾಳಾಗಿದ್ರು ಸಹ ಸರಿಪಡಿಸುವುದಕ್ಕೆ ಸಹಾಯ ಮಾಡ್ತೀನಿ ಹೆದರಿಕೊಳ್ಳಬೇಡಿ. ಇಷ್ಟು ಭರವಸೆ ಕೊಡಬಲ್ಲೆ :)

ವಿಂಡೊಸ್ ಟ್ವೀಕಿಸುವ ಮುನ್ನ ಮುಂಜಾಗ್ರತೆ ಕ್ರಮವಾಗಿ ಒಂದು ಮುಖ್ಯವಾದ ವಿಚಾರ ತಿಳಿದುಕೊಳ್ಳಬೇಕು ಅದೇನೆಂದರೆ ಅಪ್ಪಿ ತಪ್ಪಿ ಏನಾದ್ರು ಮಾಮೂಲಿನ ಕಾರ್ಯ ನಿರ್ವಹಣೆಯಲ್ಲಿ ತೊಂದರೆ ಉಂಟಾದಲ್ಲಿ ಸಿಸ್ಟಂ ಅನ್ನು ಯಥಾ ಸ್ಥಿತಿಗೆ ಮರಳುವಂತೆ ಮಾಡುವುದು.
ಕಂಪ್ಯೂಟರ್ ಕಾರ್ಯ ನಿರ್ವಹಣೆ ಅನ್ನೋದು ಮುತ್ತಿನ ಹಾಗಲ್ಲ, ಮಾತು ಆಡಿದ್ರೆ ಹೊಯ್ತು ಮುತ್ತು ಒಡೆದರೆ ಹೊಯ್ತು ಅನ್ನೊಕ್ಕೆ,ಏನು ಆಗಲೆ ಇಲ್ಲವೆಂಬಂತೆ ಕಂಪ್ಯೂಟರ್ ಅನ್ನು ಯಥಾ ಸ್ಥಿತಿಗೆ ತರಬಹುದು(ದೈಹಿಕವಾಗಿ ಹಾಳಾಗದೆ ಇದ್ದಲ್ಲಿ ಮಾತ್ರ). ಹಲವಾರು ಬಾರಿ ನೀವು ಯೋಚಿಸಿರಬಹುದು, ನೆನ್ನೆ ಚೆನ್ನಾಗಿ ಕೆಲಸ ಮಾಡುತ್ತಿತ್ತು ಇಂದು ಯಾಕೊ ಈ ಒಂದು ಪ್ರೋಗ್ರಾಂ ಶುರುನೇ ಆಗ್ತಿಲ್ವಲ್ಲ, ನೆನ್ನೆ ವೇಗವಾಗಿ ಕೆಲಸ ಮಾಡುತ್ತಿತ್ತು ಇಂದು ಯಾಕೊ ಅಳುತ್ತಿದೆಯಲ್ಲಾ!! ದೇವ್ರೆ ಕಾಪಾಡಪ್ಪ ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ರೆ ಅಂಥವನ್ನೆಲ್ಲ ತೊಂದರೆ ಇಲ್ಲದೆ ಸರಿಪಡಿಸಬಹುದು. ಹಲವು ಬಾರಿ, ವೈರಾಣುವಿನ ಹಾವಳಿಯಿಂದಲೂ ಕಾಪಡಿಕೊಳ್ಳುವುದಕ್ಕೆ ಉಪಯುಕ್ತವಾಗುತ್ತದೆ. ಅದು ಹೇಗೆ ಎಂಬುದನ್ನು ಮುಂದೆ ತಿಳಿಸುತ್ತೇನೆ
ಖಂಡಿತವಾಗಲು ನಿಮ್ಮ ಕಂಪ್ಯೂಟರ್ ಮೊದಲಿನ ತರಹ ಕೆಲಸ ಮಾಡುವ ಹಾಗೆ ಮಾಡಬಹುದು.

ಈಗ ಕಂಪ್ಯೂಟರ್ ಯಥಾಸ್ಥಿತಿಗೆ ಮರಳಿ ತರಲು ಅತ್ಯಂತ ಪ್ರಮುಖ ದಾರಿ "ಸಿಸ್ಟಂ ರೀಸ್ಟೊರ್" ಬಗ್ಗೆ ತಿಳಿದುಕೊಳ್ಳುವ.
ಇದನ್ನು ಹುಡುಕಬೇಕಾದ ಮಾರ್ಗ
Start->Programs->Accessories->System Tools->"System Restore"

೧.ಅಪ್ಪಿ ತಪ್ಪಿ ಇದು ಚಾಲ್ತಿಯಲ್ಲಿಲ್ಲದಿದ್ದರೆ ಮೇಲಿನ ಮಾರ್ಗದಲ್ಲಿ ಸಾಗುತ್ತಾ ಸಿಸ್ಟಂ ರೀಸ್ಟೊರ್ ಕ್ಲಿಕ್ಕಿಸಿದರೆ ಒಂದು ಪುಟ್ಟ ಮೆಸೇಜ್ ಬಾಕ್ಸ್ ಪ್ರತ್ಯಕ್ಷವಾಗುತ್ತದೆ.
System Restore has been Turned Off. Do you want to turn on System Restore now?
ಎಂದು ’ಹೌದು’ಎಂದು ಕ್ಲಿಕ್ಕಿಸಿ ಈಗ ಮೆಸೇಜ್ ಬಾಕ್ಸ್ ಮಾಯವಾಗಿ ನಿಮಗೆ "System Properties"ಎನ್ನುವ ಸಾಧನ ತೆರೆದುಕೊಳ್ಳುತ್ತದೆ. ಅಲ್ಲಿ "turn off System Restore" ಎನ್ನುವುದನ್ನು ಟಿಕ್ ಆಗಿರುತ್ತದೆ, ಅದನ್ನು ತೆಗೆಯಿರಿ. "ಡಿಸ್ಕ್ ಜಾಗದ ಬಳಕೆ" ಎನ್ನುವುದರಲ್ಲಿ ಗರಿಷ್ಟ ಮಟ್ಟಕ್ಕೆ sliderಅನ್ನು ಜರುಗಿಸಿ. ನಂತರ "ಅನ್ವಯಿಸು" ಎನ್ನುವ ಗುಂಡಿಯನ್ನು ಒತ್ತಿ. ನಂತರ ’ಸರಿ’ಎನ್ನುವುದನ್ನು ಒತ್ತಿ.
ಈಗ ನಿಮ್ಮ ಕಂಪ್ಯೂಟರ್, ಕಾರ್ಯನಿರ್ವಹಣೆಯನ್ನು ಗಮನಿಸಲು ಶುರು ಮಾಡುತ್ತದೆ. ಗಮನಿಸುವುದಲ್ಲದೆ ಯಾವ್ದು ಸರಿ, ಯಾವುದು ತಪ್ಪು, ಎಂಬುದನ್ನು ಸಹ ನಿರ್ಧರಿಸಬಹುದು. ಎಷ್ಟು ಹಿಂದೆ ಹೆಜ್ಜೆ ಹಾಕಿದರೆ ತಪ್ಪನ್ನು ತಿದ್ದಬಹುದು ಅಂತೆಲ್ಲ ನಿರ್ಧರಿಸಲಿಕ್ಕಾಗುವುದು.
ನೀವು ಮತ್ತೊಮ್ಮೆ ಮೇಲೆ ಸೂಚಿಸಿದ ಮಾರ್ಗದಲ್ಲಿ ಹೋಗಿ System Restore ಕ್ಲಿಕ್ಕಿಸಿದರೆ ಈ ಸರ್ತಿ ನಿಮಗೆ ಒಂದು ವಿಂಡೊ ಕಾಣಸಿಗುತ್ತದೆ . ಅದರಲ್ಲಿ ನಿಮಗೆ ಎರಡು ಆಯ್ಕೆ ಸಿಗುತ್ತದೆ
೧. ಕಂಪ್ಯೂಟರ್ ಅನ್ನು ಮರುಸ್ಥಾಪಿನೆ ಮಾಡಲು ನಿರ್ಧರಿಸುವ ಸಮಯ.
೨. ಮರುಸ್ಥಾಪಿನೆ ಬಿಂದುವನ್ನು ಸೃಷ್ಟಿಸುವುದು.

ಮೊದಲನೆಯದನ್ನು ಆಯ್ಕೆ ಮಾಡಿ "ಮುಂದಿನದು" ಎಂದು ಕ್ಲಿಕ್ ಮಾಡಿದಾಗ ನಿಮಗೆ ಕ್ಯಾಲೆಂಡರ್ ಕಾಣಸಿಗುತ್ತದೆ.
ದಪ್ಪನಾದ ದಿನಾಂಕವು ಮರುಸ್ಥಾಪಿನೆ ಮಾಡಲು ಶಕ್ತವಿರುವ ಬಿಂದುವನ್ನು ತೋರುತ್ತದೆ. ಎಷ್ಟೆಲ್ಲಾ ದಪ್ಪನಾದ ಅಕ್ಷರಗಳ ದಿನಾಂಕವಿರುತ್ತದೆಯೊ ಅವೆಲ್ಲವು ಸಹಿತ ಕಂಪ್ಯೂಟರ್ ಅನ್ನು ಮರುಸ್ಥಾಪಿನೆ ಮಾಡಲು ಶಕ್ತವಿರುವ ಬಿಂದುವೆಂದು ತಿಳಿಯಬೇಕು.
ಮುಖ್ಯವಾಗಿ ಗಮನದಲ್ಲಿಡಬೇಕಾದ ವಿಚಾರವೇನೆಂದರೆ ಕಂಪ್ಯೂಟರ್‌ಅನ್ನು ಹಿಂದಿನ ದಿನಾಂಕಕ್ಕೆ ಮರುಸ್ಥಾಪಿಸಿದಾಗ ಇಂದಿನ ಕೆಲಸದ ಡೇಟಾ ಹಾಳಾಗುವುದಿಲ್ಲ.ಆದರೆ ಇಂದು ಹಾಗು ಹಿಂದಿನ ದಿನಾಂಕದ ಮಧ್ಯೆ ಸ್ಥಾಪಿಸಲಾಗಿರುವ ಪ್ರೋಗ್ರಾಂಗಳು ಮಾಯವಾಗುತ್ತವೆ,ನಿಮ್ಮ ಕಂಪ್ಯೂಟರ್ ನ ಸೆಟ್ಟಿಂಗ್‌ಗಳು ಆಯ್ಕೆ ಮಾಡಲಾದಂತಹ ಹಿಂದಿನ ದಿನಾಂಕದಂದು ಇದ್ದ ಸೆಟ್ಟಿಂಗ್‌‍ನಂತೆಯೆ ಆಗುತ್ತದೆ.

ಒಮ್ಮೆ ಈ ಸೇವೆ ಶುರುಮಾಡಿದ ನಂತರ ಕಂಪ್ಯೂಟರ್ ತನ್ನ ಪಾಡಿಗೆ ತಾನು,ಹಲವು ದಿನಗಳ ಅಂತರದಲ್ಲಿ ಹೊಸ "ಮರುಸ್ಥಾಪಿನೆ ಬಿಂದು"ವನ್ನು ಸೃಷ್ಟಿಸುತ್ತಾ ಹೋಗುತ್ತದೆ. ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಒಮ್ಮೊಮ್ಮೆ ನೀವೆ "ಮರುಸ್ಥಾಪಿನೆ ಬಿಂದು"ಸೃಷ್ಟಿಸಬೇಕಾಗಿ ಬರುತ್ತದೆ ಆಗ,ಮೇಲೆ ತಿಳಿಸಿರುವ ಆಯ್ಕೆಗಳಲ್ಲಿ ಎರಡನೆಯನದನ್ನು ಆಯ್ಕೆ ಮಾಡಬೇಕು.
ನಂತರ "ಮುಂದಿನದು" ಎಂಬ ಗುಂಡಿಯನ್ನು ಕ್ಲಿಕ್ ಮಾಡಿದಾಗ ನೀವು ಸೃಷ್ಟಿ ಮಾಡಲು ಹೊರಟಿರುವ "ಮರುಸ್ಥಾಪಿನೆ ಬಿಂದು"ವಿಗೆ ಹೆಸರಿಡಬೇಕಾಗುತ್ತದೆ, ನಿಮ್ಮ ಹೆಸರಿಟ್ಟರು ಅಡ್ಡಿಯಿಲ್ಲ :).
ಹೆಸರು ಸೂಚಿಸಿ "ಮುಂದಿನದು" ಎಂಬ ಗುಂಡಿಯನ್ನು ಕ್ಲಿಕ್ ಮಾಡಿದಾಗ ಹೊಸದಾದ "ಮರುಸ್ಥಾಪಿನೆ ಬಿಂದು"ಸೃಷ್ಟಿಯಾಗುತ್ತದೆ.

ಒಂದೆ ದಿನದಲ್ಲಿ ಎರಡು "ಮರುಸ್ಥಾಪಿನೆ ಬಿಂದು"ಸೃಷ್ಟಿಯಾಗಿದ್ದರೆ ಸಮಯವನ್ನು ಸಹ ಸೂಚಿಸುತ್ತದೆ. ಇದನ್ನು ಪರಾಮರ್ಶಿಸಲು ನೀವು ಮತ್ತೆ System Restore ತೆರೆಯುವುದರ ಮೂಲಕ ಖಾತ್ರಿಪಡಿಸಿಕೊಳ್ಳಬಹುದು.

ಈ ರೀತಿಯಲ್ಲಿ ನೀವು ಹಿಂದಿನ ದಿನಾಂಕದ "ಮರುಸ್ಥಾಪಿನೆ ಬಿಂದು"ಸ್ಥಾನಕ್ಕೆ ಹೋಗಬಹುದು ಅಥವ ಹೊಸದಾದ "ಮರುಸ್ಥಾಪಿನೆ ಬಿಂದು"ಸೃಷ್ಟಿ ಮಾಡಬಹುದು.

ಇಷ್ಟೆಲ್ಲ ಹೇಳಿ ಮುಗಿಸಿ ಆದಮೇಲೆ ಮುಂದಿನ ಟ್ವೀಕ್‌ಗಳನ್ನು ಮಾಡುವ ಮುನ್ನ ಹೊಸದೊಂದು "ಮರುಸ್ಥಾಪಿನೆ ಬಿಂದು" ಸೃಷ್ಟಿ ಮಾಡಿ, ವಿಂಡೊಸ್‌ಗೆ ನವಚೇತನ ನೀಡಲು ಅಡಿಗಲ್ಲು ಹಾಕಿ :)

ಸೂಚಿ ಸೇವೆಗಳನ್ನು ರದ್ದುಪಡಿಸುವುದು:

ಸಾಮಾನ್ಯವಾಗಿ ನಾವು ಕಂಪ್ಯೂಟರ್ನಲ್ಲಿ ಏನಾದರು ಹುಡುಕಲು ಆದೇಶಿಸಿದಾಗ ಅದು ಜೋರಾಗಿ ಸದ್ದು ಮಾಡುತ್ತಾ ನಿಧಾನವಾಗಿ ಫಲಿತಾಂಶವನ್ನು ನೀಡುವುದು ವಿಂಡೊಸ್‌ನ ಸಹಜ ಗುಣ.
ಇದನ್ನು ತಪ್ಪಿಸಿ ತ್ವರಿತವಾಗಿ ಸದ್ದಿಲ್ಲದೆ ಕಂಪ್ಯೂಟರ್ ಕೆಲಸ ಮಾಡಲು ಕೆಳಗೆ ತಿಳಿಸಿರುವ ಕೆಲಸವನ್ನು ನಾವು ಮಾಡಬೇಕು.
ಇದು ಹೇಗೆ ಕೆಲಸ ಮಾಡುತ್ತೆ ಅನ್ನೋದು ತಿಳ್ಕೋಬೇಕಿದ್ರೆ ಕೇಳಿ ತಿಳಿಸ್ತೀನಿ

೧.Start ಮೆನು ಕ್ಲಿಕ್ಕಿಸಿ
೨.ನಂತರ Settingsಗೆ ಹೋಗಿ
೩.ಅದರಲ್ಲಿ Control Panel ಆಯ್ಕೆ ಮಾಡಿ
೪.ನಂತರ Add/Remove Programs ಅನ್ನು ಕ್ಲಿಕ್ಕಿಸಿ, ಪುಟ್ಟ ವಿಂಡೊ ಪುಟಿಯುತ್ತದೆ
೫.ಇದರಲ್ಲಿ ಎಡಭಾಗದಲ್ಲಿ ೪ ವಿಭಾಗಗಳಿರುತ್ತವೆ,ಆ ನಾಲ್ಕರಲ್ಲಿ Add/Remove Window Components ಎನ್ನುವುದನ್ನು ಆಯ್ಕೆ ಮಾಡಿ.
೭.ಇದನ್ನು ಆಯ್ಕೆ ಮಾಡಿದ ನಂತರ Windows component wizard ಎನ್ನುವ ಮತ್ತೊಂದು ಪುಟ್ಟ ವಿಂಡೊ ಪುಟಿಯುತ್ತದೆ
೭.ಈ ವಿಂಡೊನಲ್ಲಿ ಹಲವಾರು Windows component ಪಟ್ಟಿಯಾಗಿರುತ್ತದೆ ಅದರೊಳಗೆ "ಸೂಚಿ ಸೇವೆಗಳು" ಎನ್ನುವುದು ಟಿಕ್ ಗುರುತಿನ ಮೂಲಕ ಆಯ್ಕೆಯಾಗಿದ್ದಲ್ಲಿ
ಆ ಟಿಕ್ ಗುರುತನ್ನು uncheck ಮಾಡಿ ತೆಗೆದುಬಿಡಿ.
೮.ನಂತರ Next ಎನ್ನುವ ಗುಂಡಿಯನ್ನು ಒತ್ತಿ.
೯.ವಿಂಡೊಸ್ ಇದನ್ನು ಮಾನ್ಯ ಮಾಡಿ Finish ಎನ್ನುವ ಗುಂಡಿಯನ್ನು ತೋರಿಸುತ್ತದೆ, ಅದನ್ನು ಕ್ಲಿಕ್ಕಿಸಿದೊಡನೆ ನಿಮ್ಮ ಗ.ಯಂ ಹುಡುಕುವ ಕಾರ್ಯಗಳಲ್ಲಿ ತೊಡಗಿದಾಗ ಚೂಟಿಯಾಗುತ್ತದೆ :).

ಹಿಗ್ಗಿಸಬಹುದಾದ ಕಾರ್ಯದಕ್ಷತೆ ಗಣಕವನ್ನು ರದ್ದುಪಡಿಸುವುದು:

ನಾವು ಆದೇಶಿಸಿದ ಕೆಲಸ ಆದ್ರೆ ಸಾಕಲ್ವ,ಯಾವ ಆದೇಶಕ್ಕೆ ಕಂಪ್ಯೂಟರ್ ಎಷ್ಟು ಬೇಗ ಸ್ಪಂದಿಸುತ್ತದೆ, ಇದು ನಿಜವಾಗಲು ಪೂರ್ಣಪ್ರಮಾಣದ ದಕ್ಷತೆ ತೋರಿತೆ ಎನ್ನುವ ಲೆಕ್ಕಾಚಾರಗಳು ನಮಗೆ ಅಗತ್ಯವಿದೆಯೆ?
ಇಂಥಹ ಕೆಲಸಗಳು ನಮ್ಮ ಆದೇಶಗಳನ್ನು ನೆರವೇರಿಸುವಲ್ಲಿ ಸಹಾಯ ಮಾಡದಿದ್ದರು ಕಂಪ್ಯೂಟರ್ ಮಂದಸ್ಮಿತವಾಗುವ ಹಾಗೆ ಮಾತ್ರ ಖಂಡಿತವಾಗಿ ಮಾಡುತ್ತದೆ.
ಹಾಗಾಗಿ ಈ ಗಣಕವನ್ನು ರದ್ದುಪಡಿಸುವುದು ಅವಶ್ಯಕ.
ಇದಕ್ಕೋಸ್ಕರ ನೀವು ಪುಟ್ಟ ತಂತ್ರಾಶವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು, ಕೊಂಡಿ ಇಲ್ಲಿದೆ
http://sites.google....
ಡೌನ್ಲೋಡ್ ಮಾಡಿದ ನಂತರ ಅನ್‌ಝಿಪ್ ಮಾಡ್ಬೇಕು,ಹೊರಬರುವ exe ಕಡತವನ್ನು ಡಬಲ್ ಕ್ಲಿಕ್ ಮಾಡಿ ತಂತ್ರಾಂಶವನ್ನು C:\Program Files ಎನ್ನುವ ಮಾರ್ಗದಲ್ಲಿ ಸ್ಥಾಪಿಸಿದರೆ ಒಳಿತು.
ಸ್ಥಾಪಿಸಿದ ನಂತರ
೧. C:\Program Files\ ಎಂಬ ಮಾರ್ಗದಲ್ಲಿ Resource Kit ಎಂಬ ಫೋಲ್ಡರ್‌ಅನ್ನು ತೆರೆಯಿರಿ.
೨. ಇದರೊಳಗೆ exctrlst.exe ಎಂಬ ಕಡತದ ಮೇಲೆ ಡಬಲ್ ಕ್ಲಿಕ್ ಮಾಡಿ.
೩. ಕ್ಲಿಕ್ ಮಾಡಿದ ನಂತರ ಪುಟ್ಟ ವಿಂಡೊ ಶುರುವಾಗಿ ಹಲವಾರು ಸೇವೆಗಳ ಪಟ್ಟಿ ತೋರಿಸುತ್ತದೆ.
೪. ಅದರೊಳಗೆ ಪ್ರತಿ ಸೇವೆಗು ಸಹ ಕಾರ್ಯದಕ್ಷತೆ ಗಣಕಗಳು ಸಕ್ರಿಯವಾಗಿದೆ ಎಂದು ತೋರಲು check box ಇರುತ್ತದೆ.
೫. ನೀವು ಮಾಡಬೇಕಿರುವುದಿಷ್ಟೆ, ಪ್ರತಿ ಸೇವೆಯ ಮೇಲೆ ಕ್ಲಿಕ್ಕಿಸುತ್ತಾ ಆಯಾ ಕಾರ್ಯದಕ್ಷತೆ ಗಣಕಗಳು ಸಕ್ರಿಯವಾಗಿದೆ ಎಂಬ check box ನಿಂದ ಟಿಕ್ ಗುರುತನ್ನು ತೆಗೆಯಬೇಕು
೬. ಎಲ್ಲಾ ಸೇವೆಗಳಿಗು ಟಿಕ್ ಗುರುತನ್ನು ತೆಗೆದ ಮೇಲೆ ವಿಂಡೊವನ್ನು ಮುಚ್ಚಿರಿ.

ನಿಮ್ಮ ಕಂಪ್ಯೂಟರ್‌ಗೆ ಸ್ವಲ್ಪ ಶಕ್ತಿಕೊಟ್ಟಂತಾಗುತ್ತದೆ.

ಫೋಲ್ಡರ್‌ಗಳಲ್ಲಿ ಹುಡುಕುವುದನ್ನು ಚುರುಕುಗೊಳಿಸುವುದು:

"ಮೈ ಕಂಪ್ಯೂಟರ್" ಡಬಲ್ ಕ್ಲಿಕ್ಕಿಸಿ ಅದರ ಮೂಲದ ಯಾವುದಾದರು ಡ್ರೈವ್ ಒಳಗೆ ಹುಡುಕುವುದಾಗಲಿ ಮಾಡುವಾಗ ನಿಮಗೆ ಕಂಪ್ಯೂಟರ್ ನಿಧಾನವಾಗಿ ಕೆಲಸ ಮಾಡುತ್ತಿದೆ ಎನ್ನಿಸಬಹುದು.
ಹೀಗೆ ಯಾಕಾಗುತ್ತದೆ ಎಂದರೆ ವಿಂಡೊಸ್ ನಿಮ್ಮ ಕಂಪ್ಯೂಟರ್‌ನಲ್ಲಿ ಸ್ಥಾಪಿತವಾದಾಗಿನಿಂದಲೆ, ಪ್ರತಿ ಫೋಲ್ಡರ್/ಕಡತ ಹುಡುಕುವುದರಲ್ಲಿ ತೊಡಗುವಾಗ ಅನವಶ್ಯಕವಾಗಿ ಜಾಲದಲ್ಲಿ ಇರುವ ಕಡತಗಳನ್ನು ಹಾಗು ಅಚ್ಚುಯಂತ್ರವನ್ನು ಸಹ ಹುಡುಕಲು ರೂಪಿಸಲಾಗಿರುತ್ತದೆ(ಇವರಡು ಲಭ್ಯವಿಲ್ಲದಿದ್ದರು ಸಹ..).
ಇದನ್ನು ತಪ್ಪಿಸಿದರೆ ಹುಡುಕುವ ಕಾರ್ಯವ್ಯಾಪ್ತಿ ಚಿಕ್ಕದಾಗಿ ಹುಡುಕುವ ಕಾರ್ಯ ಮತ್ತಷ್ಟು ಚುರುಕಾಗುತ್ತದೆ. ಇದಕ್ಕೆ ನಾವು ಮಾಡಬೇಕಾಗಿರುವ ಕೆಲಸ

೧."ಮೈ ಕಂಪ್ಯೂಟರ್" ತೆರೆಯಿರಿ.
೨. "ಸಾಧನ" ಮೆನ್ಯು ಮೇಲೆ ಕ್ಲಿಕ್ಕಿಸಿ.
೩. "ಫೋಲ್ಡ್ರರ್ ಆಯ್ಕೆಗಳು" ಎಂಬುದನ್ನು ಕ್ಲಿಕ್ಕಿಸಿ.
೪. "ವೀಕ್ಷಿಸು" ಎಂಬ ಟ್ಯಾಬ್ ಕ್ಲಿಕ್ಕಿಸಿ.
೫. "ಸ್ವಯಂಚಾಲಿತವಾಗಿ ಜಾಲದಲ್ಲಿರುವ ಕಡತಗಳನ್ನು ಹಾಗು ಅಚ್ಚುಯಂತ್ರಗಳನ್ನು ಹುಡುಕು" ಎಂಬ check boxನಲ್ಲಿ ಟಿಕ್ ಗುರುತನ್ನು ತೆಗೆಯಿರಿ
೬. "ಅನ್ವಯಿಸು" ಎಂಬ ಗುಂಡಿಯನ್ನು ಕ್ಲಿಕ್ಕಿಸಿ
೭. ನಂತರ "ಸರಿ" ಎಂಬ ಗುಂಡಿಯನ್ನು ಕ್ಲಿಕ್ಕಿಸಿ
೯. ಇದಾದ ನಂತರ ನಿಮ್ಮ ಕಂಪ್ಯೂಟರ್ ಅನ್ನು ಪುನರ್ಶುರು ಮಾಡಿ

ಸೂಚಿ ಸೇವೆ = Indexing Services
ಹಿಗ್ಗಿಸಬಹುದಾದ ಕಾರ್ಯದಕ್ಷತೆ ಗಣಕ = Extensible Performance Counter
ಜಾಲದಲ್ಲಿ ಇರುವ ಕಡತ = network files
ಅಚ್ಚುಯಂತ್ರ = printer
ಸಾಧನ = Tools
ಫೋಲ್ಡ್ರರ್ ಆಯ್ಕೆಗಳು = Folder options
ವೀಕ್ಷಿಸು = View
ಸ್ವಯಂಚಾಲಿತವಾಗಿ ಜಾಲದಲ್ಲಿರುವ ಕಡತಗಳನ್ನು ಹಾಗು ಅಚ್ಚುಯಂತ್ರವನ್ನು ಹುಡುಕು = Automatically search for network folders and printers
ಅನ್ವಯಿಸು = Apply
ಸರಿ = OK
ಪುನರ್ಶುರು = Reboot
ಡಿಸ್ಕ್ ಜಾಗದ ಬಳಕೆ = Disk Space Usage
ಮುಂದಿನದು = Next
ಮರುಸ್ಥಾಪಿನೆ ಬಿಂದು = Restore point

ಮುಂದುವರೆಯುವುದು.....

No comments: