Tuesday, June 29, 2010

ಸ್ಲಮ್ ಟೂರಿಸಮ್ ನ ಸುತ್ತ....

on February 2, 2009

ಸದ್ಯಕ್ಕೆ ಸುದ್ದಿ ಮಾಧ್ಯಮಗಳಿಗೆ ಪುಟ ತುಂಬಿಸೊಕ್ಕೆ ಬಿಸಿ ಬಿಸಿಯಾಗಿ ಸಿಕ್ಕಿರೊದು ಸ್ಲಮ್ ಡಾಗ್ ಮಿಲ್ಲಿಯನೇರ್. ಹೆಚ್ಚು ಜನ ನೋಡಿರ್ತೀರ ಕಮ್ಮಿ ಜನ ಕೇಳಿರ್ತೀರ, ಒಟ್ಟಿನಲ್ಲಿ ಆಗಿರೊದು ಏನಂದ್ರೆ ನಮ್ಮ್ ಚಡ್ದಿ ನಾವೆ ಬಿಚ್ಚಿ ಪ್ರದರ್ಶನಕ್ಕಿಟ್ಟು ಶಭಾಷ್ ಗಿರಿ ಪಡ್ಕೊಂಡ ಹಾಗೆ. ಚಿತ್ರ ನಿರೂಪಣೆ ಚೆನ್ನಾಗಿ ಹೆಣೆದಿದ್ರು, ಹೆಣೆಯೊಕ್ಕೆ ಬಳಸಿದ ದಾರ ಮಾತ್ರ ಬಳಸಬಾರದಂತಹ ದಾರ. ಗೋಲ್ಡನ್ ಗ್ಲೋಬ್ ಅವಾರ್ಡ್ ಪಡೆದಾದ್ರು ಏನು ಸಾಧಿಸಿದರು? ಭಾರತೀಯರ ಕಲಾ ನೈಪುಣ್ಯಕ್ಕೆ ಮಾನ್ಯತೆ ದೊರೆತ್ತಿದ್ದಾದ್ರು ಯಾವ ಪುರುಷಾರ್ಥ ಸಾಧಿಸಿದ ಹಾಗೆ? ಚಿತ್ರದ ಪ್ರತಿ ಸನ್ನಿವೇಶದಲ್ಲೂ ನಿಮಗೆ ಸೂಕ್ಷ್ಮವಾಗಿಯೊ, ಪರೋಕ್ಷವಾಗಿಯೊ ಅಥವಾ ಕಣ್ಣಿಗೆ ರಾಚುವಂತೆಯೊ ಗೊಚರಿಸುವುದು ಭಾರತೀಯತೆಯ ಮಾನ ಹರಾಜಗುವುದು ಮಾತ್ರ. ಚಿತ್ರದ ಮೊದಲ ಸನ್ನಿವೇಶದಲ್ಲೆ ಒಬ್ಬ ಅಮಾಯಕನ ಮೇಲೆ ಪೋಲಿಸರ ದೌರ್ಜನ್ಯ, ಅವಮಾನೀಯ ಹಲ್ಲೆ, ಕೇಸ್ ಇಲ್ಲದೆಯೆ ವಿಚಾರಣೆ.. ಹೀಗೆ ಹತ್ತು ಹಲವು. ಇಂದಿನ ಕಾಲಮಾನದಲ್ಲಿ ಭಾರತ ಎಂದರೆ ಈಸ್ಟ್ ಏಷಿಯಾದ ರೈಸಿಂಗ್ ಸನ್ ಇದ್ದ ಹಾಗೆ ನಮ್ಮ ದೇಶವನ್ನು ಹೇಗೆ ಪ್ರದರ್ಶಿಸಬಹುದು ಈಗ ಪ್ರದರ್ಶಿಸಿರುವ ರೀತಿ ನೆನೆಸಿಕೊಂಡರೆ ಊಹಿಸಲು ಅಸಾಧ್ಯ!!!

ವಿ.ಸೂ: ಕೆಳಗಿನ ವಿಷಯಗಳನ್ನು ಭಾರತೀಯನಂತೆ ಕಾಣಬೇಡಿ, ಭಾರತದ ಜನಜೀವನದ ಗುರುತು ಪರಿಚಯವಿಲ್ಲದ ಅಥವಾ ಕಮ್ಮಿ ತಿಳಿದುಕೊಂಡಿರುವ ಹೊರದೇಶದವರಂತೆ ಓದಿ
ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳ ಕಡೆ ನೋಡಿದರೆ ಕಾಣುವುದು..

೧. ಅಮಾಯಕನ ಮೇಲೆ ಪೋಲಿಸರ ದೌರ್ಜನ್ಯ, ಅವಮಾನೀಯ ಹಲ್ಲೆ, ಕೇಸ್ ಇಲ್ಲದೆಯೆ ವಿಚಾರಣೆ -- ಇರಾಕ್ ನ ಯುದ್ಧ ಖೈದಿ ಅಥವಾ ಯು.ಎಸ್ ನ ಭದತ್ರಗೆ ಅಪಾಯವೆನಿಸುವವರ ವಿಚಾರಣಾ ಕೇಂದ್ರವಾದ "ಗ್ವಾಂಟಾನೆಮೊ ಬೆ"ಗೆ ನಾವು ಹೋಲಿಸಲು ಸಹ ಆಗುವುದಿಲ್ಲ. "ಗ್ವಾಂಟಾನೆಮೊ ಬೆ" ಯಾಕಪ್ಪ? ಅಂತಂದ್ರೆ ಇಲ್ಲಿ ನಡೆಯುವ ವಿಚಾರಣೆಗಳು ಯಾವುದೆ ಕೇಸ್ ಇಲ್ಲದೆಯೆ ಹೆಚ್ಚು ನಡೆಯುವುದು. ಕೇವಲ ಮುಸ್ಲಿಮ್ ಎನ್ನುವ ಕಾರಣಕ್ಕೆ ಒಳಗೆ ತಳ್ಳಿ ಅವರಿಗೆ ಚಿತ್ರಹಿಂಸೆ ಕೊಟ್ಟು ಟೈಮ್ ಪಾಸ್ ಮಾಡುವ ಸೈನಿಕರು, ಅಧಿಕಾರಿಗಳು. ಇಷ್ಟು ವರ್ಷ ಅಂತರ್ ರಾಷ್ಟ್ರೀಯ ಒತ್ತಡ ಇದ್ದರು ಸಹಿತ ಅದನ್ನು ಮುಚ್ಚದೆ ತಮ್ಮ ದಂಧೆ ನಡೆಸುತ್ತಿದ್ದರೆ. ಇತ್ತಿಚೆಗಷ್ಟೆ ಅಲ್ಲಿ ವಿಚಾರಣ ನಿಯಮಗಳು ಬದಲಾಗಿವೆ. ಇಲ್ಲಿ (ಬೆ ಅಲ್ಲಿ) ನಡೆಯುತ್ತಿದ್ದ ವಿಚಾರಣ ನಿಯಮದಲ್ಲಿ ಅತ್ಯಂತ ಸೈನಿಕಪ್ರಿಯವಾಗಿದ್ದು "ವಾಟರ್ ಬೋರ್ಡಿಂಗ್", ನೀರನ್ನು ಶ್ವಾಸನಾಳಕ್ಕೆ ನುಗ್ಗಿಸುವುದು ಈ ವಿಚಾರಣೆಯ ರೀತಿ. ಕೇವಲ ಶ್ವಾಸನಾಳದ ಬಾಗಿಲಿಗೆ ಅನ್ನದ ಚೂರು/ಯಾವುದೆ ಪದಾರ್ಥ ಸಿಕ್ಕಿಬಿದ್ದಾಗ ನೆತ್ತಿ ತಟ್ಟಿಕೊಂಡು, ಬಗ್ಗಿ ಬೆನ್ನ ಮೇಲೆ ಬಡಿಸಿಕೊಂಡು, ನೀರು ಕುಡಿದು ಸಾವರಿಸಿಕೊಳ್ಳುವ ಹೊತ್ತಿಗೆ ಪ್ರಾಣ ಹೋಗುವ ಅನುಭವ ಆಗುವ ನಮಗೆ ಪದಾರ್ಥ ಒಳಗೆ ಹೋದರೆ ಹೇಗೆ ಅನುಭವ ಆಗಬಹುದು ಒಮ್ಮೆ ಯೋಚಿಸಿ. ಇಂತಹ ಯಾತನೆಯನ್ನು ಕೊಡುವುದು ಬೆ ಅಲ್ಲಿ ಅತ್ಯಂತ ಸೈನಿಕಪ್ರಿಯ ವಿಚಾರಣಾ ನೀತಿ. ಇಂತಹ ಸನ್ನಿವೇಶದಲ್ಲಿ ಒಬ್ಬ ಸೈನಿಕಪ್ರಿಯ ಖೈದಿಯ ಹೆಸರು "ಷಿಟ್ ಫೇಸ್" ಈ ಹೆಸರು ಏಕೆಂದರೆ ಆ ಖೈದಿ ಯಾವಾಗಲು ಅಂದರೆ ೨೪x೭ ಯಾವಗಲು ತನ್ನ ಮುಖಕ್ಕೆ ತನ್ನದೆ ಮಲವನ್ನು ಬಳಿದುಕೊಂಡಿರುತ್ತಿದ್ದ. "ಇಂತಹ ಮಜ"ವನ್ನು ಕೊಡುತ್ತಿದ್ದ ಕಾರಣ, ಹಿಂಸೆಯಲ್ಲಿ ಅವನಿಗೆ ಸ್ವಲ್ಪ ಕಡಿತ. ನಾಯಿಯಿಂದ ಕಚ್ಚಿಸುವುದು, ಪ್ರಾಣಿಗಳಂತೆ ಎರಡು ಕೈ, ಕಾಲು ಬಗ್ಗಿಸಿ ಇಡಿ ದಿನ ಅಲುಗಾಡಲು ಆಗದಷ್ಟು ಚಿಕ್ಕದಾದ ಬೋನಿನಲ್ಲಿ ಅದೆ ರೀತಿಯಾಗಿ ಕೂಡಿಹಾಕುವುದು ಎಲ್ಲಾ ನಗಣ್ಯವಾದ ಉದಾಹರಣೆಗಳು..
೨. ಧಾರಾವಿ "ಏಷಿಯಾದ ಅತ್ಯಂತ ದೊಡ್ಡ ಸ್ಲಮ್"ನ ಜನ ಜೀವನವನ್ನು ನಕಾರಾತ್ಮಕ ಧೋರಣೆಯಲ್ಲಿ ಬಿಂಬಿಸಿರುವುದು. ಧಾರಾವಿ ಎಂಬುದು ಸ್ಲಮ್ ನಿಜ, ಆದರೆ ಒಂದು ಸ್ಲಮ್ ನ ವಿನ್ಯಾಸನ್ನು ಯಾರು ಬದಲಾಯಿಸಲು ಆಗುವುದಿಲ್ಲ ಅಲ್ಲಿನ ಜನಜೀವನ ಬೇರೆ ಸ್ಲಮ್ ಗಿಂತ ಹೆಚ್ಚು ಭಿನ್ನವಿಲ್ಲದಿದ್ದರು ಚಿತ್ರದಲ್ಲಿ ಬಿಂಬಿಸಿರುವಂತೆ ಕೆಟ್ಟದಿಲ್ಲ. ಧಾರಾವಿಗೆ ತನ್ನದೆ ವಿಶೇಷತೆ ಇದೆ, ಅಲ್ಲಿನ ಜನರು ಹೆಚ್ಚು ಪ್ರಜ್ಞ್ನಾವಂತರಾಗಿದ್ದಾರೆ, ಸಮಾಜದಲ್ಲಿ "ಕೇವಲ ಸ್ಲಮ್ ಜನ" ಕಳ್ಳಕಾಕರರು, ಕೊಲೆಗಡುಕರು, ವ್ಯಭಿಚಾರಿಗಳು ಎನಿಸಿಕೊಳ್ಳದೆ ಮರ್ಯಾದಸ್ತ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನೆ, ಹೆಂಡತಿ, ಮಕ್ಕಳು, ಇತರೆ ಜವಾಬ್ದಾರಿಗಳನ್ನು ಅರಿತು ಜೀವಿಸುತ್ತಿದ್ದಾರೆ. ಮಂದಗಾಮಿಗಳಾಗಿ ಸಮಾಜಕ್ಕೆ ಹೊರೆಯಾಗಿ ಜೀವಿಸುತ್ತಿಲ್ಲ ಚುರುಕಿನಿಂದ ಕೆಲಸಗಳಲ್ಲಿ ತೊಡಗಿಸಿಕೊಂಡು ಹೊಟ್ಟೆಹೊರೆದುಕೊಳ್ಳುತ್ತಾರೆ. -
ಯು.ಎಸ್ ನ "ನಿಗ್ಗರ್ ನೆಯ್ಬರ್ ಹುಡ್"ಗಳಿಗಿಂತ ಕಡೆಯೇನಿಲ್ಲ. ನಿಗ್ಗರ್ ಗಳೆಂದೆ ದೂಷಿತರಾಗಿ ಸಮಾಜದಿಂದ ಹೊರಗಟ್ಟಲ್ಪಟ್ಟಿ ತಮ್ಮದೆ ಕಾಂಕ್ರೀಟ್"ಕಾಲೋನಿ"ಯಲ್ಲಿ ರೋಗಗ್ರಸ್ತರಾಗಿ, ಹಗಲು ದರೋಡೆ, ಅತ್ಯಾಚಾರ, ಕೊಲೆಗಡುಕುತನ, ಮಾದಕ ವಸ್ತುಗಳ ಸೇವನೆ, ವ್ಯಭಿಚಾರ, ಮಾನಸಿಕ ಒತ್ತಡದಲ್ಲಿ ತೊಳಲಾಡಿಕೊಂಡು "ನಾಯಿ"ಪಾಡು ಪಡುವ ಜೀವನ ಧಾರಾವಿಯ ವಸ್ತುಸ್ಥಿತಿಗಿಂತ ಹೀನಾಯ ಎನ್ನಲೇನಡ್ಡಿಯಿಲ್ಲ. ಮೈಬಗ್ಗಿಸಿ ದುಡಿಯುತ್ತೇವೆಯೆಂದರು ಸಮಾಜದಲ್ಲಿ ಒಂದು ಸ್ಥಾನವಿಲ್ಲ. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಓದಿ ಪ್ರೆಸಿಡೆಂಟ್ ಆದ ಒಬಾಮ ಈ "ನಿಗ್ಗರ್ ನೆಯ್ಬರ್ ಹುಡ್"ಗಳಿಂದ ಬಂದವರಲ್ಲ. ನೆನ್ನೆಯಷ್ಟೆ (ಜನೇವರಿ ೩೦/೩೧) ನೈರೋಬಿಯಲ್ಲಿರುವ ಅವರ ತಮ್ಮನನ್ನು(ತಂದೆಯ ಎರಡನೆಯ ಸಂಬಂಧದಿಂದ) ಮಾದಕ ವಸ್ತು ಸೇವನೆ ಕಾಯ್ದೆಯಡಿ ಜೈಲಿಗೆ ತಳ್ಳಿದ್ದಾರೆ. ಇದರ ಬಗ್ಗೆ ಯಾರು ಪ್ರತಿಕ್ರಿಯಿಸುತ್ತಾರೆ?

೩. ಪೋಲಿಸ್ ಗಳು ಬಾಲಕರನ್ನು ಅಟ್ಟಿಸಿಕೊಂಡು ಬರುವಾಗ ಧಾರಾವಿಯ ಪಾಕ್ಷಿಕ ನೋಟ, ಗಲ್ಲಿಗಳಲ್ಲಿ ಓಟ ಧಾರಾಳವಾಗಿ ಚಿತ್ರಿಸಿರುವ ನಿರ್ದೇಶಕನ ತಂಡ ಯು.ಎಸ್ ನ "ನಿಗ್ಗರ್ ನೆಯ್ಬರ್ ಹುಡ್"ಗಳಿಗೆ ಕಾಲಿಡಲು ಭಯ ಪಡುವಂತಹ ಪರಿಸ್ಥಿತಿ ಅಲ್ಲಿ ಪೋಲಿಸರೆ ಹೆಜ್ಜೆ ಇಡಲು ನೂರು ಬಾರಿ ಯೋಚಿಸುತ್ತಾರೆ. ಇನ್ನು ಅಲ್ಲಿ ಚಿತ್ರೀಕರಣ ಮಾಡಲಿಕ್ಕೆ ಆಗುತ್ತದೆಯೆ? ಇದನ್ನು ತಪ್ಪಿಸಲು ಅವರು ಹಾಲಿವುಡ್ ನ ಸೆಟ್ ಗಳಲ್ಲೆ ಸಂತೃಪ್ತಿ ಪಡಬೇಕು. ಹಾಗಾಗಿ ಅವರ "ಕಾಲೋನಿಯ" ಪಾಕ್ಷಿಕ ನೋಟ, ಗಲ್ಲಿಗಳಲ್ಲಿ ಓಟ ಕನಸಿನಲ್ಲೆ ಸಾಧ್ಯ. ಇದರ ಬಗ್ಗೆ ಯಾರಿಗೆ ಯೋಚನೆ ಬರುತ್ತದೆ?

೪. ಅಮಿತಾಭ್ ಎನ್ನುವ ಚಿತ್ರತಾರೆಯ ಬಗ್ಗೆ ಜನರಿಗಿರುವ fanatism ಬಿಂಬಿಸಲು, ಚಿತ್ರದ ಸನ್ನಿವೇಶದಲ್ಲಿ ಮಲಕೂಪದಲ್ಲಿ ಬಿದ್ದು ಹೊರಲಾಡಿ ಬರುವ ಹುಡುಗನ ಸನ್ನಿವೇಶ ಬೇಕಿತ್ತೆ? ಚರಂಡಿಯ ವ್ಯವಸ್ತೆಯನ್ನು "ಉದಾರವಾಗಿ" ಚಿತ್ರೀಕರಿಸಿರುವ ನಿರ್ದೇಶಕನಿಗೆ ಬಾಗಿಲಿನ ಅಗಳಿ ಅಷ್ಟು ಭದ್ರತೆಯಿಂದ ಕೂಡಿರುತ್ತದೆಯೆಂಬುದು ಹೇಗೆ ಹೊಳೆಯಿತೊ? ನಿರ್ದೇಶಕನಿಗೆ ಜನ ಆ ದೃಶ್ಯವನ್ನು ನಕ್ಕು ಮರೆತುಬಿಡುವ ಸನ್ನಿವೇಶಯೆಂದೆನಿಸಿತೆ? ಅಥವಾ ಸ್ಲಮ್ ನ ಆ "ಒಂದು ಭಾಗ"ವನ್ನು ಆದಷ್ಟು ಹೀನಾಯವಾಗಿ ಚಿತ್ರೀಕರಿಸಬೇಕೆಂಬ ಹಂಬಲ ಇತ್ತೆ? ಇಡೀ ಧಾರಾವಿಯಲ್ಲಿ ಅದೆ ರೀತಿಯ ಪಾಯಿಖಾನೆಗಳು ಮಾತ್ರ ಇವೆ ಎಂಬುದು ಬಿಂಬಿಸಬೇಕಿತ್ತೆ?

೪. ಶಾಲೆಯಲ್ಲಿ ಕುರಿಮಂದೆಯ ಪ್ರದರ್ಶನ ಬೇಕಿತ್ತೆ? ಅಥವಾ domestic violence/harassment ರೀತಿ categorize ಮಾಡಬಹುದಾದ ಆ ಮೇಷ್ಟರ ನಡತೆ ಅಗತ್ಯವಿತ್ತೆ? ಪರಿಸ್ಥಿತಿಯ ಅರ್ಥ ತಿಳಿಸಲು ಬೇರೆ ಮಾರ್ಗಗಳೆ ಇರಲಿಲ್ಲವೆ, ಇದು ಒಂದು ಅಂತರ್ ರಾಷ್ಟ್ರೀಯ ಚಿತ್ರ ಎಂಬುದು ತಿಳಿದಿರಲಿಲ್ಲವೆ? ನಮ್ಮ ದೇಶದ ವೀಕ್ಷಕರಿಗೆ ಮೇಷ್ಟ್ರು ವಿದ್ಯಾರ್ಥಿಗೆ ಬರೆ ಹಾಕಿದರು ಅಚ್ಚರಿ ಪಡುವುದಿಲ್ಲ-
ಅಷ್ಟು ಮಕ್ಕಳು ಕಲಿಯಲು ಅಥವಾ ಹಾಜರಿದ್ದರು ಅನ್ನುವುದೆ ಸಂತೋಷದ ವಿಚಾರ ನಮ್ಮ ಸರ್ ಎಮ್.ವಿ, ಅಂಬೇಡ್ಕರ್ ಅವರು ವಿದ್ಯಾಭ್ಯಾಸ ಮಾಡಿದ ರೀತಿ ಯು.ಎಸ್ ನಲ್ಲಿ ಯಾರದ್ರು ಮಾಡಿದ್ದರೆ ಅದನ್ನು ಜಗತ್ತಿನ ಇತಿಹಾಸ ಅಂತ ಹಣೆಪಟ್ಟಿ ಕೊಟ್ಟು ದರ್ಬಾರು ಮಾಡುತ್ತಿದ್ದರು. ಈಗ ಅವರ ಮಕ್ಕಳೆ ಓದು ವಿದ್ಯೆ ಕಡೆ ಗಮನ ಹರಿಸದೆ ಹಾಳು ಬೀಳುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ. ವಿದ್ಯಾರ್ಥಿಯ ಮೇಲಿನ "ದೌರ್ಜನ್ಯ" ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಸ್ವೀಕಾರ ಆಗಬಹುದೆಂಬ ಯೊಚನೆಯಿಲ್ಲವೆ?

೫.ಒಂದು ಸ್ಲಮ್ ಜೀವನದಲ್ಲಿ ಜಾತಿಭೇಧವಿರಲು ಸಾಧ್ಯವೆ ಇಲ್ಲ ಏಕೆಂದರೆ ಅಲ್ಲಿ ನೆಲೆಸಿರುವವರೆಲ್ಲ ಕೇವಲ ಒಂದೆ ವರ್ಗ/ಜಾತಿ - ಬಡವರು. ನಿರ್ಗತಿಕರ ತಾಣ ಧಾರಾವಿ, ಮೇಲು ಕೀಳೆಂಬ ವಿಂಗಡಣೆಯಿಲ್ಲದೆ ಪರಸ್ಪರ ವಿಶ್ವಾಸದಿಂದ (ಎಲ್ಲರೂ ಒಂದೇ ಮನೋಭಾವ ಇಟ್ಕೊಂಡಿರ್ತಾರೆ ಅಂತೇನಿಲ್ಲ ಆದ್ರೂ ಹೆಚ್ಚಿನಾಂಶದಲ್ಲಿ) ಬಾಳುವ ಜನ. ಇದು ಒಂದು ರೀತಿಯಲ್ಲಿ ಅನಿವಾರ್ಯತೆ ಕೂಡ ಕಾರಣ ಇವರಿಗೆ ನೆರೆಹೊರೆಯವರೆ ಬಂಧುಗಳು, ಆಪತ್ತಿಗಾದವನೆ ಆಪತ್ಭಾಂಧವ, ಏನಂತೀರಾ?ಹಬ್ಬಹರಿದಿನಗಳಲ್ಲಿ ಜಾತಿಮತ ಮರೆತು ಒಂದಾಗಿ ಆಚರಿಸುವ ಜನ. ಕೇವಲ ಕೆಲವು ಸಮಾಜದ ಕ್ರಿಮಿಗಳಿಂದ ಜಾತಿ ಮತದ ವಿಂಗಡಣೆಯಾಗಿ ಆಂತರಿಕ ಘರ್ಷಣೆ ಆಗುವುದು ಸಹಜ.ಆದರೆ ಚಿತ್ರದಲ್ಲಿ ಬಿಂಬಿಸಿರುವಂತೆ organized genocide ಸಾಧ್ಯವೆ? -
ಹಿಟ್ಲರ್ ಗೆ ಇಂದಿಗು ಸಹ ಅಭಿಮಾನಿಗಳಿದಾರೆ!!! ಕ್ರೈಸ್ತರ ಗೊವಾ ಇನ್ಕ್ವಿಸಿಷನ್ (goa inquisition), ಟಿಪ್ಪು ಮಾಡಿದ ೧೦೦೦ ನಾಯರ್ ಮನೆತನಗಳ ಸರ್ವನಾಶ ಆಗಿನ ಕಾಲದಲ್ಲಿ ೧ ಮನೆಗೆ ೧೦-೧೫ ತಲೆಗಳಿರುತ್ತಿದ್ದವು ಅಂಥಾದ್ರಲ್ಲಿ ೧೦೦೦ ಮನೆತನಗಳು ಅಂದರೆ ಕನಿಷ್ಟ ೧೦-೧೫೦೦೦ ಜನರ ಕಗ್ಗೊಲೆ!!! ದೇವಸ್ಥಾನಗಳ ಸರ್ವನಾಶ ಮಾಡಿ ಅದೇ ಕಲ್ಲಿನಿಂದ ಕುತುಬ್ ಮಿನಾರ್ ಕಟ್ಟಿ ಇಡುವ ಪ್ರತಿ ಹೆಜ್ಜೆ ದೇವಸ್ಥಾನವನ್ನೆ ತುಳಿಯುವಂತೆ ಮಾಡಿರುವ ಕೃತ್ಯ, ಇಂದಿರಾ ಗಾಂಧಿ ಹತ್ಯೆಗೆ ಕಾರಣವಾದ "ಸಿಖ್" ಕಮ್ಮ್ಯುನಿಟಿಯನ್ನೆ ಗುರಿ ಮಾಡಿ ಹೆಂಗಸರು ಮಕ್ಕಳು ಎನ್ನದೆ ೩೦೦೦ ಜನರ ಕಗ್ಗೊಲೆ ಕೇಂದ್ರ ಸರ್ಕಾರದ ಆಡಳಿತದಲ್ಲಿದ್ದ ಕಾಂಗ್ರೆಸ್ ನ ಛಾಯೆಯಡಿಯಲ್ಲೆ ಆಯಿತು, ಕರ ಸೇವಕರನ್ನು ಸಜೀವ ದಹನ ಮಾಡಲು ಹಿಂದಿನ ರಾತ್ರಿಯೆ ೧೪೦ ಲೀಟರ್ ಪೆಟ್ರೊಲ್ ಅನ್ನು ಹತ್ತಿರದಲ್ಲಿರುವ ಪೆಟ್ರೊಲ್ ಬಂಕಿನಿಂದ ಖರೀದಿಸಿ ಘಟನಾ ಸ್ಥಳದ ಹತ್ತಿರದ ಲಾಡ್ಜ್ ನಲ್ಲಿ ಇಡಲಾಗಿದ್ದ ಅಂಶ ನಂತರ ನಡೆದ ಪ್ರತಿಕ್ರಿಯೆ ೨೦೦೦ ಮಂದಿಯ ಹತ್ಯೆಗೆ ಕಾರಣವಾದವು, ತನ್ನ ಛಾಪನ್ನು ಮತ್ತಷ್ಟು ಸ್ಥಿರಗೊಳಿಸಲು ಇರಾಕ್ ಮೇಲೆ ಸುಳ್ಳು ಆರೋಪ ಮಾಡಿ ಸದ್ದಾಂನನ್ನು ಮುಗಿಸಿ, ಆ ದೇಶಕ್ಕೆ ಎಳ್ಳು ನೀರು ಬಿಟ್ಟ ಯು.ಎಸ್ ನ ನೀತಿ organized genocide ಎನ್ನಬಹುದು. ಯು.ಎಸ್ ನ ಇಂತಹ ಪಾಲಿಸಿಗಳಿಗೆ ಬೆಲೆ ತೆತ್ತ ವಿಚಾರ ಮಾಡಿದರೆ ಅದಕ್ಕೆ ಬೇರೆಯದೆ ಲೇಖನ ಬೇಕಾಗುತ್ತದೆ..

೬.ಗಲಭೆಯ ಸನ್ನಿವೇಶದಲ್ಲಿ ರಾಮನ ಹಾಗೆ ನೀಲಿ ಬಣ್ಣ ಬಳಿದುಕೊಂಡು ಬಿಲ್ಲು ಬಾಣ ಹಿಡಿದು ನಿಂತಿದ್ದ ಹುಡುಗನನ್ನು ತೋರಿಸಿದಾಗ ಎರಡು ರೀತಿಯ ವಿಚಾರ ಮಾಡಬಹುದು on a lighter note ಅದನ್ನು ಕೆದಕದೆ ಅರ್ಥ ತಿಳಿಯಲೆಬೇಕೆಂಬ ಹಂಬಲ ಇಟ್ಟುಕೊಳ್ಳದೆ ನಿರ್ಲ್ಯಕ್ಷಿಸಬಹುದು, ofcourse - ignorance is bliss ಆದರೆ ಇಲ್ಲಿ ಯೋಚಿಸಬೇಕ್ಕಾದ್ದು ರಾಮನೆ ಯಾಕೆ? ರಾಮನೊಬ್ಬನೆ ಹಿಂದುಗಳು ಪೂಜಿಸುವ ದೈವವೆ? ಅಥಾವ ರಾಮ ಜನ್ಮ ಭೂಮಿಯ ವಿವಾದದ ವಿಚಾರವನ್ನೆ ಹಿನ್ನೆಲೆಯಾಗಿಟ್ಟುಕೊಂಡು ಚಿತ್ರೀಕರಿಸಿದ ಹಿನ್ನೆಲೆಯೆ? ಅಥಾವ ಯು.ಎಸ್ ನ ಹೆಸರಾಂತ ನಟಿಯೊಬ್ಬಳು (ಹಾಳಾದ್ದು ಮರೆವು ಹೆಸರು ಮರೆತು ಹೋಗಿದೆ :() ಹಾಲ್ಲೊವೀನ್ ಪಾರ್ಟಿಯ(ದೆವ್ವಗಳ ಅಥವಾ ವಿಚಿತ್ರವಾದ ವೇಷ ಹಾಕಿ ಮದ್ಯವ್ಯಸನ ಮಾಡಿ ನಂತರ "ಮಜ" ಮಾಡುವುದು ಪಾರ್ಟಿಯ ಉದ್ದೇಶ, ಈ ಸಂಸ್ಕೃತಿ ಶುರುವಾದ ಕಾರಣ ಏನೇ ಇದ್ದರು ಇಂದಿನ ಮುಖ ಇದು) ಕಾಸ್ಟ್ಯೂಮ್ ಆಗಿ ಕಾಳಿ ಮಾತೆಯ ವೇಷ (ಅವಳಿಗೆ ಬೇರೆ ಹೊಳೆಯಲೆ ಇಲ್ಲ ಅಂತ ಕಾಣುತ್ತೆ ಪಾಪ) ಧರಿಸಿ ಯು.ಎಸ್ ನ HUF ಎಂಬ ಹಿಂದು ಸಂಸ್ಥೆಯ ಕೆಂಗಣ್ಣಿಗೆ ಗುರಿಯಾಗಿ ಮೀಡಿಯಾ ಮುಂದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಯಿತು. ನಿರ್ದೇಶಕನೊಬ್ಬನಿಗೆ ಗೊತ್ತು ಅಲ್ಲಿ ರಾಮನ ವೇಷ ಯಾಕೆ ಬೇಕಿತ್ತು ಅಂತ.

೭. ಬೃಹನ್ಮುಂಬೈನ ಕಾಮಟಿಪುರದ ಗಲ್ಲಿ ತೋರಿಸಿ ಇಲಿ ಬೋನಿನಂತಿರುವ ಜಾಗಗಳಲ್ಲಿ "ಕೂಡುವ" ಕಾಮಿಗಳ ಪ್ರದರ್ಶನ ಮಾಡಿ ಕಷ್ಟಪಟ್ಟು ಇಕ್ಕಟಿನಲ್ಲೆ ಸುಖಿಸುವ ಪ್ರೇಮಿಗಳ ಮೇಲೆ ಕನಿಕರ ಅಥವಾ ಹೇಸಿಗೆ ಹುಟ್ಟಿದರೆ ಆಚ್ಚರಿಯೇನಲ್ಲ ಅಥ್ವಾ ಹೆಣ್ಣು ಮಕ್ಕಳ ಶೋಷಣೆ ಎಂಬ ಚಿತ್ರ ಮನಸ್ಸಿನಲಿ ಅಚ್ಚುಮೂಡಿದರು ಆಶ್ಚರ್ಯವಿಲ್ಲ. ಇದನ್ನು ವೀಕ್ಷಿಸಿದ ಹೊರದೇಶದವರಿಗೆ ಅವರ ಸ್ವೇಚ್ಛಾಚಾರವೆ ಹಿರಿದು ಎಂಬ ಭಾವನೆ ಮೂಡಿಸಿ ನಮ್ಮ ದೇಶದ ವೇಶ್ಯಾವಾಟಿಕೆಯ ರೀತಿಯ ಮೇಲೆ ಕನಿಕರ ಮೂಡುತ್ತದೆ. ಅವರಿಗೆ ವೇಶ್ಯಾವಾಟಿಕೆ ತಪ್ಪು ಎನಿಸುವುದಿಲ್ಲ ಆದರೆ ಮಾನವ ಹಕ್ಕು ಆಯೋಗ ಇದರ ಬಗ್ಗೆ ಚಿಂತನೆ ನಡೆಸಲುಬಹುದು. ಪಬ್ ಕಲ್ಚರ್ ಗೆ ಮಿಶ್ರ ಪ್ರಕ್ರಿಯೆ ಬಂದ ಹಿನ್ನೆಲೆಯಲ್ಲೆ ವೇಶ್ಯಾವಾಟಿಕೆಯನ್ನು ಸಹ legalize ಮಾಡಿ ಎನ್ನುವ ದಿನಗಳು ದೂರ ಉಳಿಯೊಲ್ಲ. ofcourse,
ವೇಶ್ಯಾವಾಟಿಕೆಯನ್ನು ಕಾನೂನು ಬಾಹಿರ ಮಾಡಬೇಕೆ ಬೇಡವೆ ಅನ್ನುವುದು ಬೇರೆ ವಿಚಾರ. ಆದರೆ ಚಿತ್ರದಲ್ಲಿ ಅದನ್ನು ಬಿಂಬಿಸುವ ರೀತಿ ತಪ್ಪು, ನೀವು ಸರ್ಫ್ರೋಷ್ ಎಂಬ ಆಮಿರ್ ಖಾನ್ ಚಿತ್ರ ನೋಡಿದಲ್ಲಿ ಕಾಮಟಿಪುರವನ್ನು ತೋರಿಸಿದಾಗ ಹೇಸಿಗೆ ಎನಿಸುವುದಿಲ್ಲ, ಅದು vibrant ಆಗಿ, ಮೈ ಮಾರುವುದು ದಿನ ನಿತ್ಯದ ಕೆಲಸ ಅನ್ನುವ ಮನೋಭಾವ ಬೆಳಸಿಕೊಂಡು ಜೀವನ ಮಾಡುವ ರೀತಿ ತೋರಿಸುತ್ತದೆ. ಇಂದಿನ recession ಕಾಲದಲ್ಲೂ ಬೇಡಿಕೆ ಕಡಿಮೆಯಾಗದ ಉದ್ಯಮ(ನಮ್ಮ ದೇಶದಲ್ಲಿ ಆಲ್ಲ ) ವೇಶ್ಯಾವಾಟಿಕೆ. ಅದನ್ನ ಸರಳವಾಗೆ ಚಿತ್ರೀಕರಿಸುವ ಎಲ್ಲ ವಿಧಾನಗಳು ಇದ್ದವು ಅವೆಲ್ಲವನ್ನು ಬಿಟ್ಟು ಹೀನಾಯವಾಗಿ ಪ್ರದರ್ಶಿಸುವ ಅಗತ್ಯವಿತ್ತೆ?

೮. ಧೋಭಿ ಘಾಟ್ ತೋರಿಸಿ ನಂತರ ಹೊಡೆಸಿಕೊಳ್ಳುವ ಸನ್ನಿವೇಶದಲ್ಲಿ this is bit of real india ಅಂತ ಹುಡುಗ ಅಂದಾಗ this is bit america,son ಅಂತ ಹೇಳುವ ಅಮೇರಿಕನ್ ಸಿಟಿಝನ್ ಕೈಗೆ ಹಣ ತುರುಕಿ ಕಳಚಿಕೊಳ್ಳುವ ದೃಶ್ಯದಲ್ಲಿ, ಜನರು ತಪ್ಪು ಮಾಡಿದ್ದರು ಸಹಿತ ಅಂಥವರನ್ನು ಕ್ಷಮಿಸಿ ಸಂಕಷ್ಟದಲ್ಲಿರುವ ಸಹಾಯಕ ಎನ್ನುವ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ.

೯. ಚಿತ್ರದ ನಾಯಕಿಯನ್ನು ಅರಸುತ್ತಾ ನಗರಕ್ಕೆ ಬಂದ ಅಣ್ಣ ತಮ್ಮ ಪಿಡ್ಝಾ ಹಟ್ ನಲ್ಲಿ ಕೆಲಸ ಮಾಡುವಾಗ, ಅಣ್ಣ ಖಾಲಿಯಾದ ಮಿನರಲ್ ನೀರಿನ ಬಾಟಲಿಗೆ ನಳದ ನೀರನ್ನು ತುಂಬಿ ಅದರ ಮುಚ್ಚಳಕ್ಕೆ ಫೆವಿ ಸ್ಟಿಕ್ ನಿಂದ ’ಸೀಲ್ಡ್’ ಅನ್ನುವ ಹಾಗೆ ಮಾಡುತ್ತಿರುವ ದೃಶ್ಯ ಏಕೆ ಬೇಕು? ಆ ದೃಶ್ಯವನ್ನು ಗಂಭೀರವಾಗಿ ಪರಿಗಣಿಸುವ ಯಾರೆ ಆದರು (ಹೊರ ದೇಶದವರು) ನಮ್ಮ ದೇಶದಲ್ಲಿ ದೊರೆಯುವ ಮಿನರಲ್ ನೀರನ್ನು ಬಳಸುವುದರ ಬಗ್ಗೆ ಎರಡು ಸರ್ತಿ ಯೋಚಿಸುವ ಹಾಗೆ ಮಾಡುತ್ತದೆ. ಇದು ಬೇಕಾ?

೧೦.ಕಾಲ್ ಸೆಂಟರ್ ಗಳಲ್ಲಿ ಕೆಲಸ ಮಾಡುವವರ ಕಾರ್ಯಾಚರಣೆ, ಕುರಿ ಮಂದೆಯ ತರಹ ಒಂದು ಮಾಳಿಗೆಯಲ್ಲಿ ವಿವಿಧ ಕ್ಯುಬಿಕಲ್ ನಲ್ಲಿ ಕುಳಿತು ಕೆಲಸ ಮಾಡುವ ರೀತಿ, ಚಹಾ ವಿತರಿಸುವವನು ಸಹಿತ (ಚಹಾ ವಿತರಿಸುವವನಿಗೆ ಆಂಗ್ಲ ಬಂದಲ್ಲಿ ಮಾತ್ರ) ಕರೆ ಮಾಡಿದ ಗ್ರಾಹಕನೊಂದಿಗೆ ವ್ಯವಹರಿಸುವ ಪರಿ. ತಮ್ಮ ಸ್ವಾರ್ಥಸಾಧನೆಗೆ ವೈಯಕ್ತಿಕ ಮಾಹಿತಿಗಳ ಮೇಲೆ ಹಿಡಿತವಿರುವ ಗ್ರಾಹಕ ಸಹಾಯ ಕೇಂದ್ರದ ಸಿಬ್ಬಂದಿ ಹೇಗೆ ಮಾಹಿತಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಾನೆ ಎಂಬುದನ್ನು ಚಿತ್ರಿಸಿರುವುದು. ಗ್ರಾಹಕನಿಗೆ ಸುಳ್ಳು ಮಾಹಿತಿ (ತಾನು ಸಹ ಅದೆ ದೇಶದವನೆಂದು)ಕೊಟ್ಟು ಕಾರ್ಯ ಮಾಡುವ ಬಗೆ ಹೀಗೂ ಆಗಬಹುದು ಅಂತ ಯೋಚಿಸದವರು ಸಹಿತ ಒಮ್ಮೆ ಯೋಚಿಸುವ ಹಾಗೆ ಆಗುತ್ತದೆ. ಹೇಳಿ ಕೇಳಿ, ಹೊರಗಿನಿಂದ ಬಂದು ತಮ್ಮ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವವರ ಮೇಲೆ ಸಿಟ್ಟಿದೆ ಇತ್ತೀಚಿಗಷ್ಟೆ ೫೦೦೦ ಹೆಡ್ ಕೌಂಟ್ ಕಮ್ಮಿ ಮಾಡಬೇಕೆಂದು ಯೋಜನೆ ಹಾಕಿಕೊಂಡಿರುವ ಯು.ಎಸ್ ನ ಮೈಕ್ರೊ ಸಾಫ್ಟ್ ನೆ ಮೇಲೆ ಒತ್ತಡ ಹೇರಲಾಗಿದೆ. ಹೊರ ರಾಷ್ಟ್ರಗಳಲ್ಲಿ ಮುಚ್ಚುತ್ತಿರುವ ಗ್ರಾಹಕ ಸೇವಾ ಕೇಂದ್ರದ ಕಾರ್ಯಾಚರಣೆಯು ಭಾರತಕ್ಕೆ ಬರುತ್ತಿರುವ ಬಗ್ಗೆ ಅಲ್ಲಿನವರಿಗೆ ಅಸಮಾಧಾನ ಇದೆ. ಬಹಳ ವರ್ಷಗಳ ಹಿಂದೆ ಲೇ ಆಫ್ ಆದವರಿಗೆ "ಬಾಂಗಲೋರ್ಡ್ bangalored" ಅನ್ನುವ ಹೊಸ ಪದವನ್ನು ಸೃಷ್ಟಿಸಿದ್ದರು ಏಕೆಂದರೆ ಅಲ್ಲಿನವರ ಕೆಲಸವನ್ನು ಭಾರತದ ಸಿಲಿಕಾನ್ ಸಿಟಿಯೆಂದೆ ಪ್ರಸಿದ್ಧವಾಗಿರುವ ನಮ್ಮ ಬೆಂಗಳೂರಿನವರೆ ಹೆಚ್ಚಾಗಿ ಆಕ್ರಮಿಸಿದ್ದರು :) . ಈಗ ಈ ಚಿತ್ರವನ್ನು ವೀಕ್ಷಿಸಿ ಭಾರತೀಯರ ಮೇಲೆ ಅಸಮಾಧಾನವಿರುವವರು ನಮ್ಮನ್ನು ಸ್ಲಮ್ ಡಾಗ್ಸ್ ಎನ್ನಲೂ ಬಹುದು. www.victimofprejudic...
ಪರದೆಹಿಂದೆ ಇನ್ನೂ ಸಹ ಕಾರ್ಯಗತವಾಗಿರುವ ರೇಸಿಸಂಗೆ ಮತ್ತೊಂದು ಅಸ್ತ್ರದಂತೆ ಕಂಡರು ಕಾಣಬಹುದು.

ಇಷ್ಟೆಲ್ಲಾ ರೀತಿ ಯೋಚಿಸಲು ಅವಕಾಶವಿರುವ ವೀಕ್ಷಕನಿಗೆ ಒಬ್ಬ ಯು.ಕೆ ನ ನಿರ್ದೇಶಕ ಭಾರತದ ನೈಜ್ಯ ಚಿತ್ರಣ ಮಾಡಿದ್ದಾನೆ ಎಂದರೆ ಪ್ರತಿ ಶಾಟ್ ಅನ್ನು ಸಹ surgical ಆಗಿ ವೀಕ್ಷಿಸಿ ಪ್ರತಿ ಮಾತುಕಥೆಯನ್ನು ಗಂಭೀರವಾಗಿ ಪರಿಗಣಿಸಿ. ಅಭಿಪ್ರಾಯ/ಅನಿಸಿಕೆಗಳನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ..

ಇತ್ತೀಚೆಗಷ್ಟೆ ತಾಜ್ ಹೋಟಲ್ ಮೇಲೆ ನಡೆದ ಟೆರ್ರರಿಸ್ಟ್ ದಾಳಿಯ ಪ್ರಸಂಗದಲ್ಲಿ ವಿಲಾಸ್ ರಾವ್ ದೇಶ್ಮುಖ್ ರಾಮ್ ಗೋಪಾಲ್ ವರ್ಮಾನೊಂದಿಗೆ ಆ ತಾಣದಲ್ಲಿ ಕಾಣಿಸಿಕೊಂಡು ದೊಡ್ಡ ವಿವಾದವಾಯಿತು ಕಾರಣ?.. ಟೆರ್ರರ್ ಟೂರಿಸಂ - ಮೀಡಿಯಾಗೆ ಹೊಸ ಪದ ಹೊಳೆಯಿತು, ಪುಟ ತುಂಬಿಸಿತು, ಘಂಟಾಘೋಷವಾಗಿ ಕೂಗಿಕೊಂಡರು, ನಿರ್ಗಳವಾಗಿ ಗಂಟೆಗಟ್ಟಲೆ ಮಾತಾಡಿದರು ಅಥವಾ ಹರಟೆ ಕೊಚ್ಚಿದರು ಎನ್ನಬಹುದು. ಬಾಂಬ್ ದಾಳಿ ಸಹ ಭಾರತದ ನಿರ್ಲಕ್ಷ್ಯ ಮಾಡಲಾಗದಂತಹ ಒಂದು ವಿಚಾರವಾಗಿದೆ. ಅಲ್ಲಿ ಜನರ ಪ್ರಾಣ ಹೋಯಿತು, ಜನರಿಗೆ ಸಾಂತ್ವನ, ಸಹಾನುಭೂತಿ ಬೇಕಿತ್ತು. ಅಪರಾಧಿಗೆ ಶಿಕ್ಷೆಯಾಗುವ ತನಕ ದುಖ: ಅನುಭವಿಸಿದವರಿಗೆ ನೆಮ್ಮದಿಯಿರುವುದಿಲ್ಲ. ಶಿಕ್ಷೆಯಾದರು ಸಹ ಹೋದವರು ವಾಪಸ್ಸು ಬರುತ್ತಾರೆಯೆ? ಇಲ್ಲ. ಆದರೆ ಆ ಪರಿಸ್ಥಿತಿಯನ್ನು cash ಮಾಡಿಕೊಂಡವರು ಅದೆಷ್ಟು ಜನ. ದೇಶ್ಮುಖ್ ಸಹ ನಾನು ಮಾಡ್ಕೋತೀನಿ ಅಂತ ಹೊರಟಿದ್ದು ಆದ್ರೆ ಎಡವಿ ಬಿದ್ದರು ಅಷ್ಟೆ. ಈಗ ಈ ಚಿತ್ರವನ್ನು ಸ್ಲಮ್ ಟೂರಿಸಂ ಅಂತ ಕರೆದರೆ ಅತಿಶಯೋಕ್ತಿ ಅಲ್ಲವೇನೊ, ಅಲ್ವಾ? ಟೆರ್ರರ ಟೂರಿಸಂನಲ್ಲಿ ಜನರ ಪ್ರಾಣ ಹೋಗಿತ್ತು ಸ್ಲಮ್ ಟೂರಿಸಂನಲ್ಲಿ ನಮ್ ಮಾನ ಹೋಗಿದೆ. ಸ್ಲಮ್ ಡಾಗ್ ಅನ್ನುವುದು ನಾಯಿ ಅಂತ ಸಂಬೋಧಿಸದ ಹಾಗೆ ಅಲ್ಲದಿದ್ದರು ನಾಯಿ ತರಹದ ಜೀವಿ ಅಂತ ಅನ್ಕೊಬೇಕು.

No comments: