Tuesday, June 29, 2010

ಡಾ||ಡಿ.ವಿ.ಜಿ - life and times ಭಾಗ - ೧

on March 17, 2009

D.V.Gundappa

ಇಂದು ಡಿವಿಜಿಯವರ ೧೨೨ನೇ ಜನುಮದಿನ, ಇದೆ ಸುಸಂದರ್ಭದಲ್ಲಿ ನೀಲತ್ತಹಳ್ಳಿ ಕಸ್ತೂರಿಯವರ ಪುಸ್ತಕ "ಡಾ||ಡಿ.ವಿ.ಗುಂಡಪ್ಪ ಜೀವನ ಹಾಗು ಸಾಧನೆ" ಎಂಬ ಜೀವನ ಚರಿತ್ರೆ ಆಧಾರಿತ ಪುಸ್ತಕವನ್ನು ಮೂಲವಾಗಿರಿಸಿ ನನ್ನ ಮಾತಿನಲ್ಲಿ ಆದಷ್ಟು ಸಂಕ್ಷಿಪ್ತವಾಗಿ ವಿಷಯವನ್ನು ಓದುಗರ ಮುಂದೆ ಇಡಲು ಪ್ರಯತ್ನಿಸಿದ್ದೇನೆ.. ಮೂಲ ಪುಸ್ತಕವನ್ನೆ ಓದಲು ಇಚ್ಚಿಸುವ ಆಸಕ್ತರು ನನಗೆ ತಿಳಿಸಿದಲ್ಲಿ ಕಡತವನ್ನು ಅಪ್ ಲೋಡ್ ಮಾಡಿರುವ ಕೊಂಡಿಯನ್ನು ಕೊಡುತ್ತೇನೆ..
ಡಿವಿಜಿ ಅವರ ಬಗ್ಗೆ ಏನಾದರು ಹೇಳಬೇಕೆಂದರೆ ಕೈ ಆಡೊಲ್ಲಾ, ತಲೆ ಓಡೊಲ್ಲ ಯಾಕಂದ್ರೆ ಕೇವಲ "ಡಿವಿಜಿ"ಯೆಂಬ ೩ ಅಕ್ಷರದ ಹಿಂದೆ ದೊಡ್ಡ ಜ್ಞಾನ ಭಂಡಾರವೆ ಇದೆ. ಇಂತಹ ಸಂದರ್ಭದಲ್ಲಿ,ಎಷ್ಟು ಹೇಳಿದರೂ ಕಮ್ಮಿ ಎಂತಿರುವಾಗ ಹೇಳೊದು ಕಮ್ಮಿ ಆಗಿ ಹೇಳದೆ ಇರುವ ವಿಷಯಗಳೆ ಜಾಸ್ತಿ ಆಗಿರುತ್ತವೆ. ಆದರು ಸಹ ನನ್ನ ಗ್ರಹಣೆಯ ಪರಿಮಿತಿಗೆ ತಿಳಿದಿದ್ದನ್ನು ಇತರರೊಂದಿಗೆ ಹಂಚಿಕೊಳ್ಳಲು ಇಲ್ಲಿ ಪ್ರಯತ್ನ ಪಟ್ಟಿದ್ದೇನೆ.



ಭಾಗ - ೧

ಡಿವಿಜಿಯವರು ೧೭-ಮಾರ್ಚಿ-೧೮೮೭ರಲ್ಲಿ ದೇವನಹಳ್ಳಿಯಲ್ಲಿ ವೆಂಕಟರಮಣಯ್ಯ ಹಾಗು ಅಲಮೇಲಮ್ಮ ಎಂಬುವವರಿಗೆ ಜನಿಸಿದರು. ನೆಚ್ಚಿನ ಸೋದರಮಾವ ತಿಮ್ಮಪ್ಪ ಅಕ್ಕರೆಯ ಅಜ್ಜಿ(ತಾಯಿಯ ತಾಯಿ) ಸಾಕಮ್ಮ ಇವರ ಬಾಲ್ಯದ ದಿನಗಳಲ್ಲಿ ಗಾಢವಾದ ಪರಿಣಾಮ ಬೀರಿದವರು. ಡಿವಿಜಿಯವರ ಅವರ ಮಾವನೊಂದಿಗಿನ ಹಾಗು ಅಜ್ಜಿಯ ಒಡನಾಟಗಳ ಪ್ರಸಂಗದ ಅರಿವಿನಿಂದ ಡಿವಿಜಿಯವರು ಬಾಲ್ಯದಲ್ಲಿ ತಿಂಡಿಪೋತ,ಚೂಟಿ ಹಾಗು ತಮ್ಮ ಸುತ್ತ ಮುತ್ತ ನಡೆಯುತ್ತಿದ್ದ ವಿಷಯಗಳನ್ನು ಒಣಗಿರುವ ಸ್ಪಾಂಜ್ ನೀರು ಹೀರುವಂತೆ ಗ್ರಹಿಸುತ್ತಿದ್ದ ಹುಡುಗ ಎನ್ನಬಹುದು. ಅಜ್ಜಿ ಸಾಕಮ್ಮನ ಮುದ್ದಿನ ಮೊಮ್ಮಗನಾಗಿ ಬೆಳೆದ ಇವರಿಗೆ ಮನೆಯಲ್ಲಿ ಮಾವನೊಂದಿಗೆ ಪಾಠ ನಡೆಯುವ ಸಮಯದಲ್ಲೂ ಸಹ ಚಕ್ಕುಲಿ,ಕೊಡಬಳೆಯ ಸೇವೆನೆ ಆಗುತ್ತಿತ್ತು ಅದೂ ಸಹ ಕತ್ತಲಿನಲ್ಲಿ ಮಗ್ಗಿ ಒಪ್ಪಿಸುವಾಗ :). ಕತ್ತಲೆಯ ಕೋಣೆಯಲ್ಲಿ ಎದುರಿಗೆ ಕೂತು ಪ್ರಶ್ನೆ ಕೇಳುವ ಸೋದರಮಾವ,ಆ ಪ್ರಶ್ನೆಗಳಿಗೆ ಉತ್ತರವನ್ನು ಕಿವಿಯಲ್ಲಿ ಪಿಸುಗುಟ್ಟಿ ತಿನಿಸುಗಳನ್ನು ಬಾಯಿಗೆ ತುರುಕುವ ಅಜ್ಜಿ ಪಕ್ಕದಲ್ಲಿ, ಇದು ಅವರ ಮಗ್ಗಿ ಒಪ್ಪಿಸುವ ವೈಖರಿ. ಈ ಪಾಠ(ಆಟ) ಜಾಸ್ತಿ ದಿನ ನಡೆಯಲಿಲ್ಲವೆನ್ನುವುದು ಬೇರೆ ವಿಚಾರ :)

ಬೆಳೆದ ಊರು ಮುಳುಬಾಗಿಲು (ಮೂಡಣದ+ಬಾಗಿಲು), ಊರು ಎನ್ನುವುದಕ್ಕಿಂತ ಹಳ್ಳಿ ಎನ್ನುವುದು ಹೆಚ್ಚು ಸೂಕ್ತ ಅನ್ಸುತ್ತೆ. ಇಂದಿನ ಮುಳುಬಾಗಿಲಿನ ಚಿತ್ರ ಬೇರೆ ಥರನದ್ದೆ ಇದೆ ಬಿಡಿ ಆದರೆ ಡಿವಿಜಿಯವರ ಕಾಲದ ಚಿತ್ರಣ ಊಹಿಸಿಕೊಂಡರೆ ಅದೊಂದು ದೊಡ್ಡ ಹಳ್ಳಿಯಾಗಿತ್ತು ಅಂತ ತಿಳಿಯಬಹುದು. ಇವರದ್ದು ಹತ್ತು ಹಳ್ಳಿಗೆ ಹೆಸರುವಾಸಿಯಾದ ಮನೆ (ಶೇಕ್ ದಾರ್ ಗುಂಡಪ್ಪಗಾರಿಲ್ಲು)/ಮನೆತನ (ಶೇಕ್ ದಾರ್ ಗುಂಡಪ್ಪ -ಇವರ ತಾತ), ಅವಿಭಕ್ತ ಕುಟುಂಬ ಕನಿಷ್ಟ ೨೫ ಮಂದಿ ಇದರ ಮೇಲೆ ಮನೆಗೆ ಹೋಗಿ ಬಂದು ಮಾಡುವವರು. ಒಟ್ನಲ್ಲಿ ಸಂತೆ ಮಧ್ಯೆ ಬೆಳೆದ ವಾತವರಣ ಹಾಗಾಗಿ ಸಂಬಂಧಗಳ ಗುಟ್ಟು ಅರಿವಾಗುವುದಕ್ಕೆ ಸಹಾಯವಾಯಿತೇನೊ ಮೇಲಾಗಿ ಹಳ್ಳಿಯ ವಾತವರಣ ನಿಸರ್ಗ ಮಧ್ಯೆ ಬೆಳೆದರು. ಮುಳುಬಾಗಿಲಿನ ದೂಡ್ಡ ಆಂಜನೇಯ, "ಶ್ರೀ ಮದಾಂಜನೇಯಸ್ವಾಮಿ"ಯೆ ಇವರಿಗೆ ಆದರ್ಶ, ಮಾನಸಿಕೆ ಬೆಳವಣಿಗೆಯ ಮೇಲೆ ಅತ್ಯಂತ ಪ್ರಭಾವ ಬೀರಿದ ದೈವ್ಯವೆನ್ನಲೂ ಬಹುದು ಕಾರಣ "ಬಾಳಿಗೊಂದು ನಂಬಿಕೆ"ಯೆನ್ನುವ ಇವರ ಗ್ರಂಥದಲ್ಲಿ ಆಂಜನೇಯಸ್ವಾಮಿಯನ್ನೆ ಒಬ್ಬ ವ್ಯಕ್ತಿಯ ಆದರ್ಶ ಬೆಳವಣಿಗೆಗೆ ಪೂರಕವೆನ್ನುವಂತೆ ಬಿಂಬಿಸಿದ್ದಾರೆ. ಹಳ್ಳಿಯ ವಾತಾವರಣವಾದ ಕಾರಣ ಹೆಚ್ಚು ಬದಲಾವಣೆಗಳಿಲ್ಲದೆ, ದೈನಂದಿಕ ಜೀವನ ನಡೆಯುವ ಪದ್ಧತಿಗಳು ಇವರ ಉತ್ಸುಕತೆಯನ್ನು ತಣಿಯದ ವಿಷಯಗಳು ಯಾವುದು ಬರಲಿಲ್ಲವೇನೊ, ಉದ್ರೇಕಿಸದ ವಿಚಾರಗಳೆ ಇವರಿಗೆ ಹೊಳೆಯಲ್ಲಿಲ್ಲವೇನೊ ಅಥವಾ ಮನೆಗೆ ಬಂದು ಹೋಗಿ ಮಾಡುತ್ತಿದ್ದ ಸನ್ಯಾಸಿಗಳ,ಫಕೀರರ, ಜೋಗಿಗಳ ಒಡನಾಟವೋ.. ಅಂತೂ ಮನಸ್ಸಿನ ಮೇಲೆ ಸನ್ಯಾಸವು ತನ್ನ ಛಾಪುಮೂಡಿತ್ತು. ನಂತರ ಬೆಂಗಳೂರಿನ ಜೀವನದಲ್ಲಿ ಅದರ ಹಿಂದೆ ಹೋಗಿ ಕಾರ್ಯ ನೆರವೇರದೆ ಆ ಯೋಚನೆಯನ್ನು ತಾತ್ಕಾಲಿಕವಾಗಿಯು ಸಹ ಕೈ ಬಿಡಲಾಯಿತು (ಇದು ಕೇವಲ ತಾತ್ಕಾಲಿಕ ಬೆಳವಣಿಗೆ ಆಯಿತಷ್ಟೆ ವಿನಹ ಸಂಪೂರ್ಣವಾಗಿ ನಶಿಸಲಿಲ್ಲ) ಬಹುಶ: ಅಂದು ಡಿವಿಜಿಯವರು ಸಫಲರಾಗಿದ್ದರೆ ನಮಗೆ ತಿಂಮನ ಪರಿಚಯವಾಗದೆ ನಮ್ಮನು ಅವಲೋಕಿಸಿಕೊಳ್ಳುವ, ನಿತ್ಯ ಜೀವನದ ಭಾವನೆಗಳಿಗೆ ಸ್ಪಂದಿಸಲು ಆಗದೆ, ಜೀವನದ ಸ್ವಾರಸ್ಯವನ್ನು ಕಗ್ಗದ ಮೂಲಕ ಅರಿಯುವ ಸುಸಂದರ್ಭವೆ ತಪ್ಪಿಹೋಗುತ್ತಿತೇನೊ.. ಇದಕ್ಕೆ ಕಾರಣ ಸಾಕ್ರೇಟಿಸ್ ಎಂಬ ಗ್ರೀಕ್ ಮತ್ತೊಬ್ಬ ಜ್ಞಾನಿಯ ಪುಸ್ತಕ "ಸಾಕ್ರೇಟಿಸ್‌ನ ವಿಚಾರಣೆ ಹಾಗು ಮರಣ", ಈ ಪುಸ್ತಕವನ್ನು ಓದಿ ಪ್ರಭಾವಿತರಾದ ಡಿವಿಜಿಯವರು ಜೀವನದತ್ತ ಮತ್ತೊಮ್ಮೆ ನೋಟ ಹಾಯಿಸಿದರು, ಈ ನೋಟ ಹೊಸ ಆಯಾಮವನ್ನೆ ತಿಳಿಯುವಂತೆ ಮಾಡಿತು ನಂತರದ ಮದುವೆ,ಸಂಸಾರ, ಲೋಕಾರೂಢಿ ಕರ್ಮಗಳ ಬಲೆಯೊಳಗೆ ಸಿಲುಕಿ ಆಗೊಮ್ಮೆ ಈಗೊಮ್ಮೆ ಎಂದು ಬಂದ ಸನ್ಯಾಸದ ಸೆಳೆತ ಗಮನ ಸೆಳೆಯುವುದರಲ್ಲಿ ವಿಫಲವಾಯಿತು. ಜೀವನದ ಬಂಧನಗಳು, ಬಾಂಧವ್ಯ, ಕೆಲಸ, ರಾಜಕೀಯ, ಪುನಸ್ಕಾರ, ಪ್ರಶಸ್ತಿ, ಭೇಟಿಗಳು,ಚಹಾ ಕೂಟಗಳು ಇತರೆ ನೂರಾರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಅವರಿಗೆ ನಿಶ್ಚಲವಾದ, ನಿರುಮ್ಮಳವಾದ ಜೀವನಕ್ಕೆ ಹಾತೊರೆಯುತಿತ್ತುದು ಸಹಜವೆ ಅನ್ನಿಸುತ್ತದೆ ಹಾಗಾಗಿಯೆ ಈ ಭಾವನೆಗಳನ್ನು ಅವರು "ಹಕ್ಕಿಯ ಪಯಣ" ಎಂಬ ಪ್ರಬಂಧದಲ್ಲಿ ಬಿಂಬಿಸಿದ್ದಾರೆ.

ಹೆಚ್ಚಿನ ವ್ಯಾಸಂಗ ಮಾಡದಿದ್ದರೂ ಸಹ ಉತ್ತೀರ್ಣರಾದ ಎರಡು ಪರೀಕ್ಷೆ ಕನ್ನಡ ಲೋವರ್ ಸೆಕೆಂಡರಿ ಹಾಗು ಆಂಗ್ಲ ಲೋವರ್ ಸೆಕೆಂಡರಿ. ಇಷ್ಟರ ವಿಧ್ಯಾಭ್ಯಾಸವೆ ಸಾಹಿತ್ಯದೆಡೆಗೆ ಮನಸ್ಸು ಮಾಡಲು ಸಾಕಷ್ಟಾಗಿತ್ತು, ಜೊತೆಗೆ ಹಿಡಿತವೂ ಬಂದಿತ್ತು. ತದನಂತರ ಹೆಚ್ಚು ಓದಬೇಕೆಂಬ ಹಂಬಲದಿಂದ ಮೈಸೂರು ಮಹಾರಾಜ ಕಾಲೇಜಿಗೆ ಸೇರಿದ್ದ ಪ್ರೌಢಶಾಲೆಯನ್ನು ಸೇರಿದರು. ಆದರೆ ದುರ್ದೈವದಿಂದ ಅಜ್ಜ ಅಜ್ಜಿಯ ಅವಸನ, ಊರಿನಲ್ಲಿ ಪ್ಲೇಗ್ ನ ಹಾವಳಿ, ಮಳೆಯಿಂದಾಗಿ ಮನೆಯ ಆಸ್ತಿ ಪಾಸ್ತಿಗೆ ಹನಿಯಾದ್ದರಿಂದ ತಮ್ಮ ಮೈಸೂರಿನ ನೆಲೆಯನ್ನು ಬಿಟ್ಟು ಊರಿಗೆ ಹಿಂತಿರುಗಿದರು. ಆದರೆ ಅವರ ಆ ಕಡಿಮೆ ಸಮಯದ ಮೈಸೂರಿನ ಕಾಲಾವಧಿ,ಅಲ್ಲಿನ ಉಪಧ್ಯಾಯರುಗಳು ಇವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿ ವ್ಯಕ್ತಿತ್ವಕ್ಕೆ ರೂಪು ಕೊಡುವುದಕ್ಕೆ ಸಾಕಾಗಿತ್ತು. ಊರಿಗೆ ಮರಳಿದ ನಂತರ ಕೋಲಾರದಲ್ಲಿ ಪ್ರೌಢಶಾಲೆಯ ವಿದ್ಯಾಭ್ಯಾಸ ಮುಂದುವರೆಸಿದರು ಆದರ ಕಾರಣಾಂತರಗಳಿಂದ ನಪಾಸಾದರು ಅದೂ ಕನ್ನಡ,ಗಣಿತ ಹಾಗು ವಿಜ್ಞಾನ. ಇದಕ್ಕೆ ಹಲವು ಕಾರಣಗಳಿತ್ತು ಮೈಸೂರಿನ ಓದುವ ಪರಿಸರಕ್ಕು, ಕೋಲಾರದ ಪರಿಸರದ ವ್ಯತ್ಯಾಸ, ಅನಾರೋಗ್ಯ, ಮನೆಯ ಕಡೆ ಚಿಂತೆ, ಹತ್ತು ಹಲವು. ಒಟ್ಟಿನಲ್ಲಿ ಡಿವಿಜಿಯವರು ಪರೀಕ್ಷೆಯಲ್ಲಿ ನಪಾಸಾದರು ಅನ್ನುವುದೊಂದೆ ಉಳಿಯಿತು ಆದ್ರೆ ಇದು ಅವರ ಜ್ಞಾನವನ್ನು ಅಳೆಯುವ ಸಾಧನವಾಗಿರಲಿಲ್ಲ ಅವರ ಪ್ರತಿಭೆ ಬೇರೆಯದರಲ್ಲೆ ಅಡಗಿತ್ತು. ಜೀವನವೆ ಅವರ ಗುರುವಾಗಿತ್ತು, ಎಲ್ಲಾ ಕಲಿಕೆಯು ಶಾಲೆಯ ಆವರಣವನ್ನು ದಾಟಿರುವ ವಿಚಾರಗಳೆ ಪ್ರಭಾವ ಬೀರಿದ್ದವು. ಗೆಳೆಯರು,ವಿದ್ವಾಂಸರು,ಪುಸ್ತಕ,ಪತ್ರಿಕೆ ಇವೆ ಮೊದಲಾದವುಗಳು ಇವರ ಜ್ಞಾನ ಬಂಢಾರ ಹಿರಿದಾಗಲು ಅನುವಾಯಿತು. ಇವರ ಗುರುವಾದ ಎನ್.ನಾರಾಯಣಮೂರ್ತಿಯವರು ಡಿವಿಜಿಯವರ ಬಾಳಿನ ಇತರ ಕೋನಗಳಲ್ಲಿ ಬೆಳಕು ಚೆಲ್ಲಿದವರು ಕೇವಲ ಸಾಹಿತ್ಯಕ್ಕಷ್ಟೆ ಸೀಮಿತವಾದ ಡಿವಿಜಿಯವರ ಆಪ್ತರ ವಲಯವನ್ನು ಹಿಗ್ಗಿಸಿ, ಸಾಮಾಜಿಕ ಕಾರ್ಯಗಳ ತಿಳುವಳಿಕೆ, ಜೀವನದಲ್ಲಿ ಅವಶ್ಯಕವಾಗಿರು ಇತರ ಚಟುವಟಿಕೆಗಳ ಪರಿಚಯವು ಸಹ ಎನ್.ನಾರಾಯಣಮೂರ್ತಿಯವರ ಶಿಷ್ಯತ್ವದಿಂದ ಪಡೆದರು.

ಇಷ್ಟೆಲ್ಲ ಘಟಿಸಿದ್ರು, ಪಾಂಡಿತ್ಯ ಇದ್ರೂ ಸಹ ಜೀವನೋಪಾಯಕ್ಕೆ ಅಂತ ಒಂದು ಮಾರ್ಗ ಇರಲಿಲ್ಲ. ಅಪ್ಪನ ಆಸೆಗೆ ಸೊಪ್ಪು ಹಾಕದೆ, ಒಲ್ಲದ ಮನಸ್ಸಿನಿಂದ ಅವರು ಹೇಳಿದ ಹಾಗೆ ಮಾಡಿದರು ಕೆಲಸ ಗಿಟ್ಟಿಸಲು ಸಾಧ್ಯವಾಗಲಿಲ್ಲ ಕೊನೆಗೆ ತಮ್ಮ ಭಾಗ್ಯವನ್ನು ಓರೆಗೆ ಹಚ್ಚಲು ಬೆಂಗಳೂರಿಗೆ ಧಾವಿಸಿದರು. ಬರಿಗಾಲಿನಲ್ಲಿ ಕೆಲಸಕ್ಕಾಗಿ ಬಿಸಿಲಿನ ಝಳವನ್ನು ಲೆಕ್ಕಿಸದೆ ಪಾದ ಬೊಬ್ಬೆಯೊಡೆದರೂ ಸಹ ಕೆಲಸ ಗಿಟ್ಟಿಸೆ ತೀರಬೇಕೆಂಬ ಛಲದಿಂದ ಅಲೆದರು ಬೇರೆ ಮಾರ್ಗವು ಇರಲಿಲ್ಲ ಯಾಕೆಂದರೆ ಇಷ್ಟು ಹೊತ್ತಿಗಾಗಲೆ ಅವರಿಗೆ ಮದುವೆ ಸಹ ನಡೆದು ಹೊಗಿತ್ತು ಆಗಿನ ಕಾಲಮಾನಕ್ಕನುಗುಣವಾಗುವಂತೆ. ಅಲೆದು ಅಲೆದು ಕೊನೆಗೆ ಹೊಟ್ಟೆಗೆ ಎರಡೊಪ್ಪತ್ತಿನ ಊಟಕ್ಕಾದರು ಗತಿಯಾಗಲಿ ಅಂತ ಜಟಕಾ ಬಂಡಿಗೆ ಬಣ್ಣ ಬಳೆಯುವ ಒಂದು ಸಣ್ಣ ಅಂಗಡಿಯಲ್ಲಿ ೧೦-೧೨ ರೂಪಾಯಿಗೆ ಕೆಲಸ ಮಾಡಲು ಶುರು ಮಾಡಿದರು ಅಲ್ಲಿಯು ಸಹ ಅವರ ದೌರ್ಭಾಗ್ಯವು ಒಕ್ಕರಿಸಿತು, ಕಾರಣವಾಗಿ ಆ ಮಾಲೀಕ ಅಂಗಡಿಯನ್ನೆ ಮುಚ್ಚಿದ. ಡಿವಿಜಿಯವರಿಗೆ ಮತ್ತದೆ ಗತಿಯಾಯಿತು ಆದರೆ ಈ ಸರ್ತಿ ಭಾಗ್ಯವು ದೌರ್ಭಾಗ್ಯದ ರೂಪದಲ್ಲಿ ಬಂದು ಆ ಕೆಲಸ ಕಳೆದುಕೊಳ್ಳುವ ಹಾಗೆ ಮಾಡಿತ್ತು ಏಕೆಂದರೆ ಅದೆ ಬೀದಿಯಲ್ಲಿದ್ದ ಒಂದು ಪ್ರೆಸ್‌ಗೆ ಇವರು, ಬೆಂಗಳೂರಿಗೆ ಭೇಟಿ ಕೊಡುತ್ತಿದ್ದ ಸ್ವಾಮಿ ಅಭೇದಾನಂದರನ್ನು ಕುರಿತು ರಚಿಸಿದ ಒಂದು ಆಂಗ್ಲ ಪದ್ಯವನ್ನು ಅಚ್ಚು ಹಾಕಿಸಬೇಕಿತ್ತು (ಆಂಗ್ಲ ಪದ್ಯ ಯಾಕಂದರೆ ಸ್ವಾಮಿ ವಿವೇಕನಂದರು ಜಗತ್ತಿನ ಇತಿಹಾಸ ಪುಟದೊಳಗೆ ಸೇರಿಸಿರುವ ಅವರ ಐತಿಹಾಸಿಕ ಭಾಷಣ/ಪದ್ಯವೂ ಅಂಗ್ಲದಾಗಿತ್ತು, ಹಾಗಾಗಿ ಆಂಗ್ಲದಲ್ಲಿ ಪದ್ಯ ಬರೆಯುವುದು ಆ ನಿರ್ದಿಷ್ಟ ಸಮಯದಲ್ಲಿ ಒಂದು ಟ್ರೆಂಡ್ ಆಗಿತ್ತು ). ಅದನ್ನು ಅಚ್ಚು ಹಾಕಿಸಲೆಂದು ಅಲ್ಲಿ ಹೋದಾಗ ಪ್ರೆಸ್‌ನವರ ಪರಿಚಯವಾಯಿತು, ಇವರ ಪ್ರತಿಭೆ ಲೋಕವಿಖ್ಯಾತಿಯಾಗಲು ಆ ಪರಿಚಯ ಸಣ್ಣ ಆಶಾಕಿರಣದ ಬೆಳಕು ಬೀರಿತು. "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ" ಅನ್ನುವ ಹಾಗೆ "ಸೂರ್ಯೋದಯ ಪ್ರಕಾಶಿಕಾ" ಎಂಬ ಕನ್ನಡ ವಾರಪತ್ರಿಕೆಯಿಂದ ಶುರುವಾದ ಈ ಸಣ್ಣ ಕೆಲಸ ಅವರಿಗೆ ಪತ್ರಿಕೋದ್ಯಮದಲ್ಲಿ ಕೃಷಿ ಮಾಡಲು ಅನುವಾಯಿತು. ಬೆಂಗಳೂರಿನಲ್ಲಿ ಇನ್ನೂ ಸಂಸಾರ ಹೂಡಿರಲಿಲ್ಲವಾದ್ದರಿಂದ ಕತ್ತಲಾಗುವವರೆಗು ಅಲ್ಲೆ ಕೆಲಸ ಮಾಡುತ್ತಾ ಕೂರುತ್ತಿದ್ದರು. ಇದೆಲ್ಲಾ ಕಷ್ಟಕಾರ್ಪಣ್ಯಗಳನ್ನು ಸಹಿಸಿ ಸಾಹಿತ್ಯ ಲೋಕದಲ್ಲಿ ತಮ್ಮ ಛಾಪು ಮೂಡಿಸಿದ ನಂತರ ಸರ್ಕಾರದಿಂದ ಕೆಲಸಗಳಿಗೆ ಆಹ್ವಾನ ಬಂದರೂ ಸಹಿತ ಅವೆಲ್ಲವನ್ನೂ ತಿರಸ್ಕರಿಸಿ ಲೇಖನಿಯಲ್ಲೆ ತೃಪ್ತಿಕಂಡರು,ತಮ್ಮ ಜೀವನ ಸವೆಸಿದರು.

ಪತ್ರಿಕೋದ್ಯಮದಲ್ಲಿ ಉದ್ಯೋಗ ಗಿಟ್ಟಿಸಿಯು ಆಯಿತು ಕನ್ನಡ ಆಂಗ್ಲ ಎನ್ನದೆ ಎರಡೂ ಭಾಷೆಗಳಲ್ಲಿಯು ಪಾಂಡಿತ್ಯವಿತ್ತಾದರಿಂದ ಎರಡರಲ್ಲಿಯೂ ಬರೆಯತೊಡಗಿದರು. ೧೯೧೦ ಆಸು ಪಾಸಿನಲ್ಲಿ ಅವರು ಕೆಲಸ ಮಾಡುತ್ತಿದ್ದ ಪತ್ರಿಕೆಯು ಮುಚ್ಚಬೇಕಾಗಿ ಬಂತು, ಇದೆ ಸಮಯದಲ್ಲಿ ದಿವಾನ್ ವಿ.ಪಿ.ಮಾಧವರಾಯರು ಜಾರಿಗೆ ತಂದ ಪತ್ರಿಕಾ ನಿರ್ಬಂಧದ ಕಾನೂನು ವಿರುದ್ಧ/ಪರ ಬಂದಿದ್ದೆ ಟೀಕೆ/ಟಿಪ್ಪಣಿಗಳನ್ನು ಕಲೆ ಹಾಕಿ ಪುಸ್ತಕ ಮಾಡುವ ವಿಚಾರ ಇವರಿಗೆ ಬಂತು. ಈ ಕಾರ್ಯದಲ್ಲಿ ಡಿವಿಜಿಯವರ ಕೆಲಸಕ್ಕೆ ಒದಗಿ ಬಂದವರು ಶ್ರೀನಿವಾಸ ಅಯ್ಯಂಗಾರರು, ಅದಕ್ಕಾಗಿ ಅವರೊಂದಿಗೆ ಮದರಾಸಿಗೂ ಹೊರಡಬೇಕಾಯಿತು. ಮದರಾಸಿನ ವಾಸ್ತವ್ಯ, ಜನರ ಒಡನಾಟ, ಜನರ ರಾಷ್ಟ್ರೀಯತೆಯ ಭಾವ ಡಿವಿಜಿಯವರನ್ನು ಅಲ್ಲೆ ನೆಲೆಹೂಡಲು ಯೊಚನೆ ಮಾಡುವಂತಾಯಿತು!!!! ಕನ್ನಡಿಗರಲ್ಲಿ ಈ ಗುಣಗಳು ಅಂದಿನಿಂದಲೂ ಇರಲಿಲ್ಲವೇನೊ, ಇಲ್ಲಾಗಿದ್ದಿದ್ದರೆ ಕನ್ನಡ ಆಂಗ್ಲ ಎರಡೂ ಪತ್ರಿಕೆ, ಅಲ್ಲಿ ಇದ್ದಾಗ ಬೇರೇನ್ ಗತಿ?? ತಮಿಳು, ಆಂಗ್ಲ. ಆದ್ರೆ ಆಂಗ್ಲ ಎಷ್ಟು ಪ್ರಭಾವಶಾಲಿ!!! ಕೊನೆಗೆ ತಮಿಳೊಂದೆ ಗಟ್ಟಿ. ಡಿವಿಜಿಯವರೂ ಸಹ ತಮಿಳಿನ ವಾತವರಣಕ್ಕೆ ಒಗ್ಗಿಬಿಟ್ಟಿದ್ರು ಅನ್ಸುತ್ತೆ. ನಮ್ ನಾಡಿನ ಪುಣ್ಯ, ಕನ್ನಡದ ಪುಣ್ಯ ಹಾಗು ಕೆಲವು ಕನ್ನಡಿಗರ ಪುಣ್ಯ, ಸರ್ಕಾರದ ವಿರುದ್ದದ ಅಲ್ಲಿ ಮಾಡಿದ ಯಾವ್ದೊ ಭಾಷಣ ಊರಿನವರೆಗೂ ತಲುಪಿದ ಕಾರಣ ತಂದೆಗೆ ಯಾರೊ ಕಿವಿ ಚುಚ್ಚಿ, ಮಗನಿಗೆ ಮದರಾಸಿನಿಂದ ಗಂಟು ಮೂಟೆ ಕಟ್ಟಿಕೊಂಡು ಊರಿಗೆ ಹಿಂತಿರುಗುವಂತೆ ಆಜ್ಞೆ ಹೊರಟೆಬಿಟ್ಟಿತು(ಕಿವಿ ಚುಚ್ಚಿದ ಆ ಮಹಾತ್ಮನಿಗೆ ನನ್ನ ಹೃತ್ಪೂರ್ವಕ ವಂದನೆಗಳು).

ಹಿಂತಿರುಗಿದ ನಂತರ, ರಾಜನೀತಿಜ್ಞರಾಗಿದ್ದ ದೀವನ್ ರಂಗಚಾರ್ಲು ಅವರ ಪ್ರಭಾವ ಡಿವಿಜಿಯವರ ಮೇಲೆ ತುಂಬಾ ಪರಿಣಾಮ ಬೀರಿದ ಕಾರಣ ಅವರ ಜೀವನ ಚರಿತ್ರೆಯನ್ನು ಬರೆದರು. ಈ ಕೆಲಸ ಡಿವಿಜಿಯವರನ್ನು ರಾಜಕೀಯ ನಾಯಕರ/ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಪರಿಚಯವಾಗುವುದಕ್ಕೆ ಮೆಟ್ಟಿಲಾಯಿತು.೧೯೧೨ರಲ್ಲಿ ಪತ್ರಿಕಾ ವಿರೋಧಿ ಆಡಳಿತವಿದ್ದರೂ ಸಹ ದೀವಾನ್ ಎಂ.ವಿಶ್ವೇಶ್ವರಯ್ಯನವರನ್ನು ಕಂಡು ಪತ್ರಿಕೆ ನಡೆಸುವುದಕ್ಕೆ ಅನುಮತಿ ಕೋರಿ ಹಾಗೆಯೆ "ಗುಣ ದೋಷ ವಿಮರ್ಷೆಯಿಂದ, ಗುಣವನ್ನು ತಿಳಿಸಿದರೆ ಸರ್ಕಾರಕ್ಕೆ ಜನದ ಬೆಂಬಲ ದೊರಕೀತು. ದೋಷವನ್ನು ತಿಳಿಸಿದರೆ ತಾವು ಅದನ್ನು ತಿದ್ದಿ ಸರಿಪಡಿಸುವಿರಿ" ಎಂಬ ನೇರ ನುಡಿಯಿಂದ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು. ತತ್ಪರಿಣಾಮವಾಗಿ "ಕರ್ನಾಟಕ"ಪತ್ರಿಕೆ ಶುರುವಾಗಿ ಮೊದಲ ಆಂಗ್ಲ ಆವೃತ್ತಿ ಹೊರಬಿತ್ತು. ಹಲವು ತಿಂಗಳ ನಂತರ ಕನ್ನಡ ಆವೃತ್ತಿ ಶುರುವಾಗಿ ಡಿವಿಜಿಯವರಿಗೆ ಎರಡನ್ನು ನಿಭಾಯಿಸಲು ಆಗದೆ ಕನ್ನಡ ಆವ್ರುತ್ತಿಯನ್ನು ಕೈಬಿಟ್ಟರು, ಕಡೆಗೂ ಕನ್ನಡ ಆವೃತ್ತಿಯ ಅವಸಾನವಾಯಿತು :( ಆಂಗ್ಲ ಎಂದಿನಂತೆ ಮೆರೆಯಿತು. ಆಳುತ್ತಿದ್ದ ಬ್ರಿಟೀಷರಿಗೂ ಸಂದೇಶ ತಲುಪಬೇಕೆಂಬ ಹಂಬಲವಿತ್ತೇನೊ ಆದ್ರೆ ಕನ್ನಡಿಗರಿಗೆ ಮಾತ್ರ ಡಿವಿಜಿಯವರ ಕನ್ನಡ ಲೇಖನದ ಉಣಿಸು ತಪ್ಪುವಂತಾಯಿತು. ತೀಕ್ಷ್ಣವಾಗಿರುತ್ತಿದ್ದ ಡಿವಿಜಿಯವರ ವಿಮರ್ಷೆಗಳು ಬ್ರಿಟೀಷರಿಗೆ ನುಂಗಲಾರದ ತುತ್ತಾಗಿತ್ತು :), ಇವರ ಬರವಣಿಗೆಯನ್ನು ಸ್ವತ: ಎಂ.ವಿಶ್ವೇಶ್ವರಯ್ಯನವರೆ ಹಲವು ಬಾರಿ ಪ್ರಶ್ನಿಸಿದ್ದು ಉಂಟು. ಡಿವಿಜಿಯವರ ಲೇಖನ/ಟೀಕೆ/ಟಿಪ್ಪಣಿಗಳು ತಪ್ಪುಮಾಡಿದವರ ವಿರುದ್ಧ ಹರಿಹಾಯುವ ಶೈಲಿ ಮೆಚ್ಚುವಂತದ್ದೆ ಆಗಿದ್ದರೂ ಸಹ ಕಾನೂನು ಕಟ್ಟಳೆಯನ್ನು ಕೆಲವೊಮ್ಮೆ ಮೀರುತ್ತಿದ್ದವು."ವಿಶ್ವೇಶ್ವರಯ್ಯನವರು ಹುಟ್ಟಿನಿಂದಲೆ ದೊಡ್ಡ ಮನುಷ್ಯರು, ಅನ್ಯಾಯ ಮಾಡುವುದೂ ಹಿಂಸೆ ಮಾಡುವುದೂ ಅವರ ಸ್ವಭಾವಕ್ಕೆ ತೀರ ವಿರೋಧವಾದುದು... ಅಂಥ ಮಹಾನುಭಾವರು ಸರ್ಕಾರ ನಡೆಸುತ್ತಿದ್ದ ಕಾಲದಲ್ಲಿ ಪತ್ರಿಕೆ ನಡೆಸುವುದು ಒಂದು ಸಂತೋಷದ ಕರ್ತವ್ಯವಾಗಿತ್ತು. ಅಂತಹವರ ಸಹಾನುಭೂತಿ ಪಡೆಯುವುದು ಒಂದು ಭಾಗ್ಯ" ಎಂದು ವಿಶ್ವೇಶ್ವರಯ್ಯನವರ ಗುಣಗಾನ ಕೂಡ ಮಾಡಿದ್ದಾರೆ.ಹೀಗೆ ಶುರುವಾದ ಸ್ವಂತಪತ್ರಿಕೆಯ ವ್ಯವಹಾರ ೧೯೨೫ರವರೆಗು ಅಂದರೆ ಗೋಖಲೆ ಸಾರ್ವಜನಿಕ ಸಂಸ್ಥೆ ಶುರುವಾಗುವವರೆಗು ಬರಿ ಏಳು ಬೀಳಿನ ಜೀವನವೆ ಆಗಿತ್ತು. ಎಡವಟ್ಟು ಆಗಿದ್ದು ಬರವಣಿಗೆಯ ಫಲವಾಗಿ ಅಲ್ಲ, ಲೇಖನಗಳ ಕೊರತೆಯಂತು ಅಲ್ವೆ ಅಲ್ಲ ಪತ್ರಿಕೆ ವ್ಯವಹಾರವಾಗಿ ಬೆಳೆಯದೆ ತಮ್ಮ ಸಾಹಿತ್ಯದ ಒಲುಮೆಯ ಕುಡಿಯಾಗಿ ಬೆಳೆಯಿತು,ಹಾಗಾಗಿ ಆರ್ಥಿಕ ಮುಗ್ಗಟ್ಟಿನಿಂದ ಹಲವಾರು ಬಾರಿ ಹೊಸದಾಗಿ ಶುರು ಮಾಡಿದ ಪತ್ರಿಕೆಗಳೆಲ್ಲವನ್ನೂ ಮುಚ್ಚಬೇಕಾಯಿತು.ಈ ಥರನದ ಪತ್ರಿಕೆಗಳಿಂದೆಲ್ಲಕಿಂತ ಭಿನ್ನವಾಗಿ ಗೋಖಲೆ ಸಂಸ್ಥೆಯ ಪತ್ರಿಕೆ ಶುರುವಾಯಿತು ಆದರೆ ಉದ್ದೇಶ ಮಾತ್ರ ಒಂದೆ ಆಗಿತ್ತು, "ಸಾರ್ವಜನಿಕ ಹಿತಾಸಕ್ತಿ" ಇದನ್ನೆ ಧ್ಯೇಯವಾಗಿಟ್ಟುಕೊಂಡು ಕೇವಲ ಗೋಖಲೆ ಸಂಸ್ಥೆಯ ಸದಸ್ಯರಿಗೆ ಮಾತ್ರ ಈ ಪತ್ರಿಕೆ ದೊರಕುವಂತಾಯಿತು,ಸ್ವಂತಿಕೆಯ ಲೇಖನಗಳಿಗೆ ಪ್ರಾಮುಖ್ಯತೆ ಕಮ್ಮಿ ಇತ್ತು ಇದನ್ನು ಹೊರತುಪಡಿಸಿದರೆ ಮಿಕ್ಕೆಲ್ಲ ವಿಷಯದ ಚರ್ಚೆಯಾಗುತ್ತಿತ್ತು. ಗೋಖಲೆ ಸಂಸ್ಥೆಯ ಕಾರ್ಯಕ್ರಮಗಳು,ಚಿಂತನೆ, ರಾಷ್ಟ್ರೀಯ ಘಟನೆಗಳ ಬಗೆಗಿನ ವಿಚಾರ,ಟೀಕೆ,ಟಿಪ್ಪಣಿ ಮುಖ್ಯ ಅಂಶವಾಗಿತ್ತು. ಗೋಖಲೆ ಸಂಸ್ಥೆಯ ಕಾರ್ಯಾಚರಣೆ ಹೀಗಿದ್ದರೂ ಇತರೆ ಪತ್ರಿಕೆಗಳಿಗೆ ಬರೆಯುವುದನ್ನು ಬಿಡಲಿಲ್ಲ.ಘಟನೆಗಳು ಹೀಗೆ ಮುಂದುವರೆದು ತಮ್ಮ ಪತ್ರಿಕೋದ್ಯಮದ ೬೦ನೇಯ ವರ್ಷದ ನೆನಪಿನಾರ್ಥವಾಗಿ "ವೃತ್ತ ಪತ್ರಿಕೆ" ಎಂಬ ಕೈಹೊತ್ತಿಗೆಯನ್ನು ಪ್ರಕಟಿಸಿದರು.ಪತ್ರಿಕೋದ್ಯಮ ಬಗ್ಗೆ ಸಂಪೂರ್ಣ ಮಾಹಿತಿ ಅದರಲ್ಲಿತ್ತು, ಪತ್ರಿಕೋದ್ಯಮ ಏನು?ಯಾಕೆ?ಹೇಗೆ?ಹೇಗಿರಬೇಕು?ಹೇಗಿದ್ದರೆ ಹೇಗೆ ಅನ್ನೋದನ್ನು ಸಂಪೂರ್ಣವಾಗಿ ವಿಶ್ಲೇಷಿಸಿ ಸರಳ ಭಾಷೆಯಲ್ಲಿ ಬರೆದ ಪುಸ್ತಕ.ಇನ್ನ ಅದು ಸಿಕ್ಕಾಪಟ್ಟೆ ಜನಪ್ರಿಯ ಆಯ್ತು ಅಂತ ಒತ್ತು ಕೊಟ್ಟು ಹೇಳುವ ಅವಶ್ಯಕತೆ ಇಲ್ಲ ಅಂತ ಅಂದುಕೊಂಡಿದೀನಿ :). ಈ ೬೦ ವರ್ಷಗಳಲ್ಲಿಯೆ ಪತ್ರಿಕೋದ್ಯಮಕ್ಕೆ,ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ.

ರಾಜಕೀಯದಲ್ಲೂ ಸಹ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು ಇದಕ್ಕೆ ಎಂ.ವಿಶ್ವೇಶ್ವರಯ್ಯ ಅವರ ಒತ್ತಾಯವು ಕೂಡ ಇದೆ. ಪತ್ರಿಕೋದ್ಯಮದಲ್ಲಿ ಇವರ ತೀಕ್ಷ್ಣ ಲೇಖನ ಹಾಗು ಟೀಕೆ ಟಿಪ್ಪಣಿಗಳಿಗೆ ತತ್ತರಿಸಿದ್ದರೂ ಸಹ ಅಧಿಕಾರಿಗಳು ಸರ್ಕಾರ ರಚನೆಯ ಸಮಯದಲ್ಲಿ ಇವರ ಸಹಭಾಗಿತ್ವವನ್ನು ಅಪೇಕ್ಷಿಸಿದ್ದರು."ಮಿತವಾದಿ"ಯಾದ ಡಿವಿಜಿಯವರು ಚಳುವಳಿಗಳಿಂದ ದೂರವೆ ಉಳಿದಿದ್ದರು ಆದರೆ ರಾಷ್ಟ್ರೀಯ ನಿರ್ಮಾಣದ ಹಂತದಲ್ಲಿ ಪ್ರತಿ ವಿಷಯದಲ್ಲೂ ಹಸ್ತಕ್ಷೇಪ ಮಾಡಿದ್ದರು.ಇಡಿ ರಾಷ್ಟ್ರವೆ ರಾಜ ಮಹರಾಜ ನವಾಬುಗಳ ಆಳ್ವಿಕೆಯಿಂದ ಒಡೆದಿದ್ದರ ಕಾರಣ ಏಕೀಕರಣಕ್ಕೆ ಇವರ ಮನವೊಲಿಕೆ ಅಗತ್ಯವಾಗಿತ್ತು.
ಈ ವಿಚಾರದಲ್ಲಿ ಇವರು ದೇಶದ ನಾನಾ ರಾಜ ಮಹರಾಜಗಳನ್ನು ಭೇಟಿ ಮಾಡಿ ಪರಿಸ್ಥಿತಿಯ ತಿಳುವಳಿಕೆಯನ್ನು ಸಹ ಮಾಡಿಕೊಟ್ಟಿದ್ದರು.ನಂತರ ಭಾಷೆಯ ಆಧಾರದ ಮೇಲೆ ರಾಜ್ಯ ರಚನೆ, ಹಿಂದಿ ಹೇರಿಕೆಯ ವಿಚಾರ (ಅಂದಿನ ಕಾಲದಿಂದಲೆ!!!), ಆಂಗ್ಲ ಭಾಷೆಯ ಪರ ನಿಲುವು ಹೀಗೆ ನಾನ ವಿಚಾರದಲ್ಲಿ ಚಿಂತನೆ ನಡೆಸಿ. ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಚರ್ಚೆ ಕೂಡ ಮಾಡಿದ್ದರು. ಒಟ್ಟಿನಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ವಿಚಾರ ತೆಗೆದುಕೊಂಡರು ಆ ವಿಚಾರಕ್ಕೆ ಸಂಬಂಧಿಸಿದಂತೆ ಇವರ ಆಳವಾದ ಚಿಂತನೆ, ಹಲವಾರು ಆಯಮಗಳಿಂದ ವಿಚಾರವನ್ನು ಅವಲೋಕಿಸುವ ದೃಷ್ಟಿ, ಏಕಪಕ್ಷೀಯವಾಗಿ ವಿಚಾರ ಮಾಡದ ನಿಲುವು, ವಿಷಯ ಜ್ಞಾನ.. ಹೀಗೆ ಹಲವಾರು ರೀತಿಯಿಂದಲು ಪರಿಸ್ಥಿತಿ ಅಳೆದು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು, ಜನರಿಗೆ ತಲುಪುವ ಹಾಗೆ ಮಾಡುತ್ತಿದ್ದರು. ಇದಕ್ಕೆ ಸಹಾಯವಾಗಲೆಂದೆ ಅವರು ವಿಷಯ ಸಂಬಂಧಿತ ಪುಸ್ತಕ ಓದದೆ ಇರಲಿಲ್ಲ ಶೃತಿ,ಸ್ಮೃತಿ,ಚಾಣಕ್ಯ ನೀತಿ,ಪುರಾಣ,ದೇಶ ವಿದೇಶಗಳ ರಾಜ ನೀತಿ ಪುಸ್ತಕಗಳು.. ಹೀಗೆ. ಇದೆಲ್ಲದರ ಜ್ಞಾನದ ಸಾರವಾಗಿ ಸ್ವಾತಂತ್ರ್ಯ ದೊರಕುವ ಮುನ್ನವೆ ರೂಪಿತವಾದ ಮಹಾನ್ ಕೃತಿ "ರಾಜ್ಯಶಾಸ್ತ್ರ". "ರಾಷ್ಟ್ರ-ರಾಷ್ಟ್ರಕ ಸಂಬಂಧದ ಭಾವನೆಯೂ ರಾಷ್ಟ್ರಕ ಕರ್ತವ್ಯವೂ ಸರ್ವ ಸಮಾನಯ ಧರ್ಮದ ಒಂದು ಮುಖ್ಯಾಂಶವೆಂಬ ಭಾವನೆಯು ನಮ್ಮ ದೇಶಕ್ಕೆ ಹೊಸದೆಂದು ಕಾಣುತ್ತದೆ. ಇಂಥಾ ಭಾವನೆಯನ್ನು ಪ್ರಚಾರಪಡಿಸುವುದು ಈ ಗ್ರಂಥದ ಉದ್ದೇಶ" ಎಂದು ಡಿವಿಜಿಯವರೆ ಸ್ವತ:ಹೇಳಿಕೊಂಡಿದ್ದಾರೆ.

ಮುಂದುವರೆಯುವುದು...............

No comments: