Tuesday, June 29, 2010

ಡಾ||ಡಿ.ವಿ.ಜಿ - life and times ಭಾಗ - ೨

on March 26, 2009

ಪತ್ರಿಕೊದ್ಯಮದಲ್ಲಿ ಶುರುವಾದ ವೃತ್ತಿ ಇವರನ್ನು ಸಮಾಜದ ಅನೇಕ ಗಣ್ಯರ ಪರಿಚಯವಾಗುವುದಕ್ಕೆ ಸಹಾಯ ಮಾಡಿತು.ಸಮಾಜದ ಉದ್ಧಾರಕ್ಕಾಗಿ ಹಲವಾರು ಕಾರ್ಯಗಳಲ್ಲಿ ತೊಡಗಿಸಿಕೊಂಡರು, ಎಲ್ಲಿ ನೋಡಿದರು ಡಿ.ವಿ.ಜಿ ಎನ್ನುವಂತಾಯಿತು. ದೀವಾನರಾಗಿದ್ದ ಸರ್.ಎಂ.ವಿ ಅವರ ಆಪ್ತವಲಯದವರಾಗಿದ್ದರು, ಸಿರ್ ಮಿರ್ಜಾ ಅವರಿಗು ಸಹ ಇವರು ಸಹಾಯ ಮಾಡುತ್ತಿದ್ದುದುಂಟು ಅದು ಕೂಡ ನಿಸ್ಸ್ವಾರ್ಥವಾಗಿ. ಸಮಾಜದ ಹಿತ್ತಕ್ಕಾಗಿ ದುಡಿಯುವ ಈ ತುಡಿತದ ಕಾರಣ ಇವರನ್ನು ಹಲವಾರು ಸಂಘ ಸಂಸ್ಥೆಗಳ ಜೊತೆ ಕೆಲಸ ಮಾಡುವಂತಾಯಿತು.ಹೆಚ್ಚಾಗಿ ಬಿಡಿ ಬಿಡಿಯಾಗಿ ಸಂಘಟನೆಯಾಗುತ್ತಿದ್ದ ಕಾರಣ ಈ ಸಂಘ ಸಂಸ್ಥೆಗಳು ಶುರುವಾಗ್ಗುತ್ತಿದ್ದವು ನಂತರ ಮುಚ್ಚುತ್ತಿದ್ದವು ಒಂದರ ನಂತರ ಮತ್ತೊಂದು ಆದರು ಸಹ ಧೃತಿಗೆಡದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಗೋಪಾಲಕೃಷ್ಣ ಗೋಖಲೆ ಅವರ ಪ್ರಭಾವ ಡಿ.ವಿ.ಜಿಯವರ ಮೇಲೆ ತುಂಬಾ ಇತ್ತು ಗೋಖಲೆಯವರು ನಿಧನರಾದ ನಂತರ ಇವರ ಹೆಸರಿನಲ್ಲಿಯೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಶುರುಮಾಡಿದರು, ಈ ಸಂಸ್ಥೆಯೊಂದು ಮುಚ್ಚದೆ ಇಂದಿಗೂ ಸಹ ಅದು ನಡೆಯುತ್ತಿದೆ . ದೀವಾನರಾಗಿದ್ದ ಸರ್.ಎಂ.ವಿ ಅವರಿಗೆ ಬೆಂಗಳೂರಿನಲ್ಲೊಂದು ಮೋಟಾರು ಕಾರ್ಖಾನೆ ಶುರು ಮಾಡುವ ಇಚ್ಚೆಯಿತ್ತು ಅದಕ್ಕಾಗಿ ಸಮಿತಿಯನ್ನು ಸಹ ರಚಿಸಿದ್ದರು, ಈ ಸಮಿತಿಯಲ್ಲಿ ಡಿ.ವಿ.ಜಿಯವರು ಸಹ ಒಬ್ಬರಾಗಿದ್ದರು, ಹೀರಾನಂದ್ ಹಾಗು ಸರ್.ಎಂ.ವಿಯವರನ್ನು ಹೊರತುಪಡಿಸಿ. ಆ ಯೋಜನೆ ಆಗಿನ ಸರ್ಕಾರಿ ವಿರೋಧಿ ನೀತಿಯಿಂದಾಗಿ ರದ್ದಾಯಿತು ಆದರೆ ಮುಂದೆ ಇದೆ ಆಲೋಚನೆ ಹೀರಚಂದ್ ಆವರು ಹೆಚ್.ಏ.ಎಲ್ ಶುರು ಮಾಡಲು ನಾಂದಿಯಾಯಿತು. ಪತ್ರಿಕೋದ್ಯಮದಲ್ಲಿ ಇದ್ದ ಇವರಿಗೆ ಕೆಲಸ ಮಾಡುವಾಗ ಆಂಗ್ಲ-ಕನ್ನಡ ನಿಘಂಟಿನ ಅಗತ್ಯ ತೋರಿಬಂತು ಅದಕ್ಕಾಗಿಯು ಸಹ ಓಡಾದಿದರು. ಇದೆ ಸಮಯದಲ್ಲಿ ಪತ್ರಕರ್ತರ ಸಂಘ ಶುರು ಮಾಡುವ ಆಲೋಚನೆ ಬಂದಿದ್ದು ನಂತರ ಮೈಸೂರು ಶೀಘ್ರಲಿಪಿಕಾರರ ಸಂಘದ ಬೆಳವಣಿಗೆಗೂ ಶ್ರಮಿಸಿದರು.

ಸಂಗೀತವು ಕೂಡ ಇವರ ಅಸಕ್ತಿ ಸೆಳೆಯದೆ ಬಿಡಲಿಲ್ಲ, ಸಂಗೀತ ದಿಗ್ಗಜರ ಪರಿಚಯವೂ ಆಯಿತು ಶ್ರಮವಹಿಸಿ ಹಗಲು ರಾತ್ರಿಯೆನ್ನದೆ ತಾಲೀಮು ಸಹ ನಡೆಯಿತು ಆದರೂ ಏಕೊ ಕಲೆ ಕೈಗೂಡಲಿಲ್ಲ. ಇದೆ ಸಂಗೀತದ ಪ್ರಭಾವ ಇವರ ಅನೇಕ ಕೃತಿಗಳಲ್ಲಿ ಕಾಣಬಹುದು.ಗೀತ ಶಾಕುಂತಲ ಹಾಗು ಅಂತ:ಪುರದ ಗೀತೆಗಳಲ್ಲಿ ಇವರ ಸಂಗೀತ ಪ್ರತಿಭೆಯ ಪ್ರತಿಬಿಂಬವನ್ನು ಕಾಣಬಹುದು.ತಮ್ಮ ಅನೇಕ ಹಾಡುಗಳಿಗೆ ಅವರೆ ರಾಗ ನಿರ್ದೇಶನ ಮಾಡಿದ್ದಾರೆ.

ಸರ್.ಎಂ.ವಿಯವರು ಅರ್ಥಸಾಧಕ ಪರಿಷತ್ತು ಶುರು ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಕನ್ನಡ ಸಾಹಿತ್ಯಕ್ಕೆ ಸೀಮಿತವಿಟ್ಟು ಡಿ.ವಿ.ಜಿಯವರಿಗೆ ಮುಂದಾಳತ್ವ ವಹಿಸಿದರು.ಸರ್.ಎಂ.ವಿಯವರಿಂದ ಶುರುವಾದ ಈ ಪರಿಷತ್ತಿನಿಂದ ಮೈಸೂರು ವಿಶ್ವವಿದ್ಯಾನಿಲಯ ಹಾಗು ಕನ್ನಡ ಸಾಹಿತ್ಯ ಪರಿಷತ್ತು(ಕ.ಸಾ.ಪ)ಕೂಡ ಮೊಳಕೆಯೊಡೆದವು. ಇಂದಿಗೆ ನಮಗೆ ತಿಳಿದಿರುವಂತೆ ಕನ್ನಡದ ಪಾಲನೆ ಹಾಗು ಪೋಷಣೆಗೆ ಕನ್ನಡ ಸಾಹಿತ್ಯ ಪರಿಷತ್ತು ಮಾತೃ ಸಂಸ್ಥೆಯಿದ್ದಂತೆ. ಇದಕ್ಕೆ ಶಿಲಾಧಾರಗಳಾಗಿ ಅನೇಕರು ನಿಂತಿದ್ದರು ಅವರಲ್ಲಿ ಡಿ.ವಿ.ಜಿಯವರು ಸಹ ಒಬ್ಬರು.ಕ.ಸಾ.ಪದ ೧೮ನೇಯ ಸಮ್ಮೇಳನಕ್ಕೆ ಅವರು ಅಧ್ಯಕ್ಷರಾದ ಸಂದರ್ಭದಲ್ಲಿ ಮಾಡಿದ ಪ್ರೋತ್ಸಾಹಕ ಕರೆ "ಕನ್ನಡದ ಒಂದೊಂದು ನುಡಿಯು ಕಿಡಿಯಾಗಬೇಕು,ಸಿಡಿಲಾಗಬೇಕು,ನಕ್ಷತ್ರವಾಗಬೇಕು, ಅಮೃತ ಬಿಂದುವಾಗಬೇಕು. ಇದೀಗ ನಮ್ಮ ಆಶೆ, ಈ ಆಶೆಗಾಗಿ ದುಡಿಯುವುದರಲ್ಲಿ ಎಲ್ಲಾ ದೇಶ ಬಾಂಧವರು ಅವರ ಅದೃಷ್ಟ ಶಕ್ತಿಗಳೂ ಸಹಕರಿಸಲಿ" ಇಂದಿಗೂ ಪ್ರಸ್ತುತವೆನಿಸುತದೆ. ೧೯೩೩ರಲ್ಲಿ ಕ.ಸಾ.ಪದ ಉಪಾಧ್ಯಕ್ಷರಾದಾಗ ಅದರ ಬೆಳವಣಿಗೆಗೋಸ್ಕರ ಬಹಳ ಶ್ರಮಿಸಿ, ಸದಸ್ಯತ್ವ ಹೆಚ್ಚಗುವಂತೆ ಮಾಡಲು ಜನಪ್ರಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪಂಡಿತರಲ್ಲದೆ ಜನ ಸಾಮಾನ್ಯರಿಗು ಸಹ ಆಹ್ವಾನಿಸಿದರು. ಇದರಿಂದಾಗಿ ಕ.ಸಾ.ಪ ಕನ್ನಡ ಸಾಹಿತ್ಯ ಲೋಕದ ಕೇಂದ್ರ ಬಿಂದುವಾಯಿತು.ಅಲ್ಲಿಯವರೆಗೂ ಕೇವಲ ವೈಯಕ್ತಿಕ ಮಟ್ಟಕ್ಕಿದ್ದ ಗಮಕ ಸಾಹಿತ್ಯವನ್ನು ಬೆಳೆಸಲು ಯೋಜನೆ ಹಾಕಿ, ಆಗಿನ ಖ್ಯಾತ ಗಮಕಿ ಭಾರತ ಬಿಂದುರಾಯರನ್ನು ನೇಮಿಸಿದರು, ಹಳ್ಳಿ ಹಳ್ಳಿಗೆ ಆಗಿನ ಕಾಲದಲ್ಲೆ ಸಾಹಿತ್ಯ ಕಂಪನ್ನು ಹರಡಲು ಶ್ರಮಿಸಿದರು. ಸಿಬ್ಬಂದಿಯನ್ನು ಹೆಚ್ಚಿಸಿದರು ಪರಿಷತ್ತನ್ನು ಸಾಂಘಿಕವಾಗಿ ಬೆಳಸಿ ಹೆಮ್ಮರವಾಗಿಸಿದರು.

"ಪರಿಷತ್ತಿನ ಕಾರಯ್ಕಲಾಪಗಳನ್ನು ಯಾವ ರೀತಿ ವಿಸ್ತರಿಸಬೇಕು, ಅವುಗಳ ರೂಪರೇಷೆ ಹೇಗಿರಬೇಕು ಎಂಬ ಅಂಶಗಳನ್ನು ಖಚಿತವಾಗಿ ಆಲೋಚಿಸಿ, ಅವುಗಳಲ್ಲಿ ಹಲವನ್ನು ಕಾರಯರೂಪಕ್ಕೆ ತಂದು ಧನ ಬೆಂಬಲ ಅಷ್ಟಾಗಿ ಇಲ್ಲದ್ದಿದ್ದರೂ ಪರಿಷತ್ತಿನ ವ್ಯಕ್ತಿತ್ವವನ್ನು ವ್ಯಾಪಕತೆಯನ್ನೂ ಪ್ರಭಾವವನ್ನು ಹೇಗೆ ಬೆಳೆಸಬಹುದು ಎಂಬುದನ್ನು ತೋರಿಸಿಕೊಟ್ಟವರಲ್ಲಿ ಡಿ.ವಿ.ಗುಂಡಪ್ಪನವರು ಮೊದಲಿಗರು ಎಂದರೆ ಉತ್ಪ್ರೇಕ್ಷೆಯಲ್ಲ" ಎಂದು ಪರಿಷತ್ತಿನ ಇತಿಹಾಸಕಾರ ಮಾ.ನಾ.ಚೌಡಪ್ಪನವರ ನುಡಿದಿದ್ದಾರೆ.

ಗೋಖಲೆಯವರ ಬಗ್ಗೆ ಡಿ.ವಿ.ಜಿಯವರಿಗೆ ಅಪಾರ ಗೌರವ,ಶ್ರದ್ಧೆ,ಭಕ್ತಿ.ಗೋಖಲೆಯವರ ನಿಧನದ ನಂತರ ತಾವು ಹಾಗು ತಮ್ಮ ಗೆಳೆಯ ಬಳಗದವರೊಂದಿಗೆ ಶುರು ಮಾಡಲು ಯೋಜಿಸಿದ್ದ ಸಾರ್ವಜನಿಕ ಸಂಸ್ಥೆಯನ್ನು ಗೋಖಲೆ ಸಂಸ್ಥೆ ಎಂದು ನಾಮಕರಣ ಮಾಡಿದರು. ಅಧಿಕೃತ್ವವಾಗಿ ಗೋಖಲೆ ಸಂಸ್ಥೆ ಎಂಬುದು ಪ್ರಚಾರವಾಗಿಲ್ಲದ್ದಿದ್ದರೂ ಕೆಲಸ ಕಾರ್ಯಗಳು ನಡೆಯುತ್ತಲೆ ಇದ್ದವು.ಹಲವಾರು ಅಡೆ ತಡೆಗಳ ನಂತರ ೧೯೪೫ ಫೆಬ್ರವರಿ ೧೮ರಂದು ಸಾರ್ವಜನಿಕವಾಗಿ ಉದ್ಘಾಟಿಸಲಾದ ಸಮಯದಲ್ಲಿ "೧.ಮೈಸೂರು. ಕರ್ನಾಟಕ, ಭಾರತ ಹಾಗು ವಿಶ್ವದ ಹಿತಕ್ಕೆ ಸಂಬಂಧಿಸದಿ ಎಲ್ಲ ವಿಷಯಗಳ ವ್ಯವಸ್ಥಿತವಾದ ಅಧ್ಯಯನ. ೨. ನಾಡಿನ ರಾಜಕೀಯ, ಸಾಮಾಜಿಕೆ ಸಂಸ್ಥೆಗಳಿದು ಅತ್ಯುತ್ತಮ ಫಲ ದೊರಕುವಂತೆ, ಪ್ರಜಾಪ್ರಭುತ್ವವಾದಿ ಪೌರತ್ವ ಸ್ವತಂತ್ರವಾಗಿ, ಜ್ಞಾನಪೂರ್ಣವಾಗಿ, ಪ್ರಜ್ಞಾಪೂರ್ಣಾವಾಗಿ ನಿರ್ಹವಾಗೌವರರಲ್ಲಿ ನೆರವಾಗುವುದು - ತನ್ಮೂಲಕ ಭಾರತ ಸ್ವಾತಂತ್ರ್ಯದೆಡೆಗೆ ಮತ್ತು ಪ್ರಜಾಪ್ರಬುತ್ವವಾದೀ ಜವಾಬ್ದಾರಿ ಅಡಳಿತದೆಡೆಗೆ ಮುನ್ನಡೆಯಲು ಶ್ರಮಿಸುವುದು"-ಇದು ಸಂಸ್ಥೆಯ ಗುರಿ ಎಂದು ಆ ದಿನ ಘೋಷಿಸಲಾಯಿತು.ಆದರೆ ಸಕ್ರಮಾವಾಗಿ ಶುರುವಾದದ್ದು ೧೯೪೬ ಜೂನ್‍ನಲ್ಲಿ. "ಸಾರ್ವಜನಿಕ ವಿಷಯಗಳ ನಗ್ಗೆ ನಾಡಿನಲ್ಲಿ ವಿಚಾರಪ್ರಕ್ರಿಯೆಯನ್ನು ಉತ್ತೇಜಿಸುವುದು, ಪರೀಕ್ಷಿಸುವುದು ಹಾಗು ಪರಿಶುದ್ಧಗೊಳಿಸುವುದು- ಇದೆ ಈ ಸಂಸ್ಥೆಯ ಸೇವೆ" ಎಂದು ೧೯೩೦ ರಲ್ಲೆ ಕಲ್ಪಿಸಿಕೊಂಡಿದ್ದರು.

ಗೋಖಲೆ ಸಂಸ್ಥೆ ಕೇವಲ ಒಂದು ವಿಚಾರವನ್ನು ಗುರಿಯಾಗಿಸಿ ಹುಟ್ಟಿದ ಸಾಮಾನ್ಯ ಸಂಸ್ಥೆಯಾಗಲಿಲ್ಲ, ಡಿ.ವಿ.ಜಿ ಯವರು ತಮ್ಮ ಸಮಯ,ಜ್ಞಾನವನ್ನು ಸಮಾಜದ ಏಳಿಗೆಗಾಗಿ ಕೊನೆಯವರೆಗು ದುಡಿದ ಸಂಸ್ಥೆ.ದೇಶ ವಿದೇಶಗಳ ವಿದ್ವಾಂಸರು, ಕಲಾವಿದರು, ಮುಖಂಡರು ಇದರ ನೆರಳಿಳಿನಲ್ಲಿ ಅನೇಕ ಜನ ಪರ ಕಾರ್ಯಗಳನ್ನು ನಡೆಸಿದ್ದಾರೆ.ಈ ಸಂಸ್ಥೆಯು ಸಮಾಜದ ಅನೇಕ ಸಮಸ್ಯೆಗಳ ಅಧ್ಯಯನ ಮಾಡಿ, ಪೌರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರಕ್ಕೆ ಪ್ರಯತ್ನ ಮಾಡಿದೆ. ತರುಣರಿಗೆ ರಾಮಾಯಣ, ಭಾರತ, ಗೀತೆ, ರಾಜ್ಯ ಶಾಸ್ತ್ರ, ಅರ್ಥ ಶಾಸ್ತ್ರ, ಕಾಳಿದಾಸ ಇತ್ಯಾದಿ ಮಹ ಗ್ರಂಥಗಳನ್ನು ಪರಿಚಯಿಸಿದೆ.ಸಂಸ್ಕೃತ ತರಗತಿಗಳು ಹಾಗು ಗಮಕ ತರಗತಿಗಳು ಜನಪ್ರಿಯ.ರಾಷ್ತ್ರೀಯ ಅಂತರ್ ರಾಷ್ಟ್ರೀಯ ವಿದ್ಯಮನಗಳ ಬಗ್ಗೆ ಸಂಕೀರ್ಣಗಳು ನಡೆದಿವೆ. ಆರ್ಥಿಕ ವಿಷಯ,ವಿಜ್ಞಾನದ ವಿಷಯ,ರಾಜಕೀಯ,ಶಿಕ್ಷಣ ಹೀಗ್ ಹತ್ತು ಹಲವುದರ ವಿಷಯ ಅಧ್ಯಯನಕ್ಕಾಗಿಯೆ ಪ್ರತ್ಯೇಕ ಸಮಿತಿಗಳು ರಚನೆಯಾಗಿ ವಿಮರ್ಶೆ ನಡೆದಿವೆ. ಅಲ್ಲಿನ ಪುಸ್ತಕ ಬಂಢಾರ ಸಂಶೋಧಕರಿಗೆ ಸುಗ್ಗಿ, ಅಧ್ಯಯನಗಳಿಗೆ ಆಕರ.

ಆಗಿನ ಕಾಲದ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಹೇಳಿದ್ದಾರೆ,"ಡಿವಿಜಿ ಎಂದರೆ ಗೋಖಲೆ ಸಂಸ್ಥೆ... ಗೋಖಲೆ ಸಂಸ್ಥೆ ಎಂದರೆ ಡಿವಿಜಿ". "ಶ್ರೀ ಮದ್ಭಗವದ್ಗೀತಾ ತಾತ್ಪರ್ಯ" ಅಥವಾ "ಜೀವನ ಧರ್ಮ ಯೋಗ"ಡಿವಿಜಿಯವರ ಮಹಾ ಕೃತಿ ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಮನ್ನಣೆ ಪಡೆಯಿತು . ೧೯೭೪ರಲ್ಲಿ ಕೇಂದ್ರ ಸರ್ಕಾರ ಅವರಿಗೆ ಪದ್ಮಭೂಷಣ ಬಿರುದನ್ನ್ನು ಅರ್ಪಿಸಿತು. ೧೯೬೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿಯನ್ನು ಸಮರ್ಪಿಸಿತು.ಇಷ್ಟನ್ನು ಮಾತ್ರ ತಿರಸ್ಕಾರ ಮಾಡಲಿಕ್ಕಾಗದೆ ಸ್ವೀಕರಿಸಲೇಬೇಕಾದ ಪ್ರಶಸ್ತಿಯ ಪಟ್ಟಿ. ತಿರಸ್ಕರಿಸಿದ ಪ್ರಶಸ್ತಿ, ಮನ್ನಣೆಗಳನ್ನು ಪಟ್ಟಿ ಮಾಡಿದರೆ ಅದು ತುಂಬಾನೆ ದೊಡ್ಡದಾಗುವುದರಲ್ಲಿ ಸಂಶಯ ಬೇಡ.

ಉನ್ನತ ಚಿಂತನೆ, ಸರಳ ಜೀವನ - ಇದಕ್ಕೆ ಡಿ.ವಿ.ಜಿ ಉದಾಹರಣೆ, ಅವರ ಜೀವನ ಶೈಲಿ "ಹೊರಗೆ ಲೋಕಾಸಕ್ತಿ, ಒಳಗದರ ವಿರಕ್ತಿ "

ಇಳಿಯುವನು ಮುಳುಗುವೆನು ವಿಶ್ವಾತ್ಮ ಸಾಗರದಿ|
ಮುಳುಮುಳುಗಿ ಕಳೆಯುವೆನು ಬೇರೆತನದರಿವ||
ಇಳಬಾನ್ಗಳಾಟದಲಿ ಕುಣಿಯುವೆನು ಮೈಮರೆತು|
ಗಳಸೀನಮನ:ಸ್ಥಿತಿಯ - ಮಂಕುತಿಮ್ಮ||

ಡಿ.ವಿ.ಜಿಯವರು ಕನ್ನಡ ಬರಹವನ್ನು ಆರಂಭಿಸಿದ್ದು ಜೀವನ ಚರಿತ್ರೆ-ವ್ಯಕ್ತಿ ಚಿತ್ರಗಳಿಂದ, ೧೯೧೧ರಲ್ಲಿ ಹೊರ ಬಂದ ’ದೀವಾನ್ ರಂಗಚಾರ್‌ಲು’ ಇವರ ಮೊದಲ ಕೃತಿ, ನಂತರದ ದಿನಗಳಲ್ಲಿ ಇವರು ರಾಜರಾಮ್ ಮೋಹನ್ ರಾಯ್,ದಾದ ಭಾಯಿ ನವರೋಜಿ, ಗೋಪಾಲ ಕೃಷ್ಣ ಗೋಖಲೆ, ಶ್ರೀ ವಿದ್ಯಾರಣ್ಯ ಸ್ವಾಮಿ ಇವರುಗಳ ಜೀವನ ಚರಿತ್ರೆಗಳನ್ನು ಬರೆದರು ನಂತರ ಆಂಗ್ಲ ಕೃತಿಗಳ ಅನುವಾದಗಳನ್ನು ಸಹ ಮಾಡಿದರು. ಷೇಕ್‌ಸ್ಪೀಯರ್, ಕೀಟ್ಸ್,ಟೆನ್ನಿಸನ್, ಬ್ರೌನಿಂಗ್ ಅವರ ಕೃತಿಗಳಿಂದಲೂ ಸಹ ಉತ್ತೇಜಿತರಾಗಿ ಕನ್ನಡಿಗರು ಸಹ ಅದನ್ನು ಆಸ್ವಾದಿಸಲೆಂದು ಕನ್ನಡ ಭಾಷೆ, ಇಲ್ಲಿನ ಪರಿಸರಕ್ಕೆ ಹೊಂದುವಂತೆ ಅನುವಾದ ಮಾಡುತ್ತಿದ್ದರು ಆದರು ಸಹ ಅವರೆ ಹೇಳುವಂತೆ ’ನವುರಾದ ಮಾತುಗಳು ನವುರಾದ ಭಾವಗಳು....ತರ್ಜುಮೆಗೆ ಸಿಲುಕುವುದೆ ಬೇರೆ ಭಾಷೆಯಲಿ?’ ಎನ್ನುವುದು ಸಹ ಡಿ.ವಿ.ಜಿಯವರು ಅರಿತಿದ್ದರೂ ಮೂಲ ಕೃತಿಗೆ ಆದಷ್ಟು ನ್ಯಾಯ ಒದಗಿಸುವುದಕ್ಕೆ ಪ್ರಯತ್ನ ಪಡುತ್ತಿದ್ದರು. ಕುರುಡುಗಣ್ಣಿಗಿಂತಲು ಮೆಳ್ಳಗಣ್ಣು ಮೇಲಲ್ಲವೆ :).ವನಸುಮ ಕವನದಲ್ಲಿ ಡಿ.ವಿ.ಜಿಯವರ ಜೀವನ ದರ್ಶವೆ ಅಡಗಿದೆ, ನಿವೇದನೆ - ಸೃಷ್ಟಿ ಕರ್ತನಿಗೆ ತಲೆಬಾಗುವ ಕೃತಜ್ಞ್ನತಾ ಭಾವ ವ್ಯಕ್ತಪಡಿಸುತ್ತದೆ. ಅಂತ:ಪುರ ಗೀತೆ, ಕೇತಕಿವನ, ಉಮರನ ಒಸಗೆ, ಈಶೋಪನಿಷತ್ತು,ಬೇಲೂರಿನ ಶಿಲಾಬಾಲಿಕೆಯರು, "ಶ್ರೀ ರಾಮ ಪರೀಕ್ಷಣಂ",

ಏನು ಜೀವನದರ್ಥ, ಏನು ಪ್ರಪಂಚಾರ್ಥ?
ಏನು ಜೀವಿ ಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ಞಾನ ಪ್ರಮಾಣವೇಂ?
ಒಗಟೆಯೇನೀ ಸೃಷ್ಟಿ?

ಎಂದು ಮಂಕುತಿಮ್ಮ ಕಗ್ಗ ಆರಂಭ ಸೃಷ್ಟಿಯ ಬಗ್ಗೆ ಬೆರಗು,ತಿಳಿಯುವ ಕೌತುಕ, ಮೂಡುವ ಪ್ರಶ್ನೆಗಳಿಂದಲೆ ಶುರುವಾಗುತ್ತವೆ. ಇದೆ ಹಾದಿಯಲ್ಲಿ ಮರುಳ ಮುನಿಯ ಕೂಡ ಪರಿಚಯಿಸಿದರು.

ಮರುಳ ಮುನಿಯನ ಮನಸ್ಸು ಸರಳ ಬಾಳ್ವೆಯ ಕನಸು
ಸರಸ ಋತ ಸೌಜನ್ಯ ಶಾಂತಿಗಳ ಸೊಗಸು|
ಕೆರೆಯಿನೆದ್ದಲೆಯೆರಚಿ ತಣಿವು ತುಂತುರನಿಸಿತು
ಮರಳಿ ತೆರೆ ಸೇರ್ವುದಲ - ಮರುಳ ಮುನಿಯ.

ಎನ್ನುವುದು ಕಗ್ಗದ ಧಾಟಿಯಲಿದ್ದರು ಕಗ್ಗದಷ್ಟು ಖ್ಯಾತಿಯಾಗಲಿಲ್ಲ. ಕಗ್ಗದಲ್ಲಿ ಕೌತುಕ,ಪ್ರಶ್ನೆ, ಸೋಜಿಗ.. ಇಂತಹ ಉದ್ವೇಗಕ್ಕೆ ಸಂಬಂಧಿಸಿದ ವಿಷಯಗಳನ್ನು ತೆರೆದಿಡುವ ಕೃತಿ, ಮರುಳ ಮುನಿಯನಲ್ಲಿ ನಿರಾಳ ಹೆಚ್ಚು, ಜೀವನವನ್ನು ತಿಳಿದ ಪಕ್ವತೆಯ ವಿಚಾರಗಳು, ಮಕ್ಕಳಿಗೆ ಸಮಾಧಾನ ಹೇಳುವಂತಹ ಧಾಟಿ. "ಜೀವನ ಸೌಂದರ್ಯ ಮತ್ತು ಸಾಹಿತ್ಯ" ಆರು ಪ್ರಕರಣಗಳ ಸಂಗ್ರಹ. ಹಕ್ಕಿಯ ಪಯಣ - ಪ್ರಬಂಧ, ಮುಂತಾದ ಕೃತಿಗಳು ಒಂದಕ್ಕಿಂತ ಒಂದು ಭಿನ್ನವಾಗಿ ಓದುಗರಿಗೆ ಅಭ್ಯಾಸಯೋಗ್ಯ ಕೃತಿಗಳು ದೊರೆತವು.

ತಮ್ಮ ಜೀವಿತಾವಧಿಯ ೮೭ ವರ್ಷಗಳಲ್ಲಿ ಸುಮಾರು ೭೦ ವರ್ಷ ಸಮಾಜಕ್ಕಾಗಿಯೆ ಜೀವ ಸವೆಸಿದ ಆದರ್ಶ.ಕೊನೆಯ ಉಸಿರಿರುವರೆಗು ಸಾಹಿತ್ಯ ಲೋಕವನ್ನು ಪೋಷಿಸಿದ ಚೇತನ ಡಿ.ವಿ.ಜಿ. ತಮ್ಮ ೩೬-೩೭ ವಯಸ್ಸಿಗೆ ಪತ್ನಿಯನ್ನು ಕಳೆದುಕೊಂಡರು ಸಹ ಎರಡನೆ ಮದುವೆಯಾಗದೆ, ಒತ್ತಾಯ ಮಾಡುವವರಿಗೆ ವಿಧವೆಯಾಗಿದ್ದ ತನ್ನ ತಂಗಿಯ ಮದುವೆ ಮಾಡಿಸಿದರೆ ತಾನು ಸಹ ಮದುವೆಗೆ ಸಿದ್ಧ ಎಂಬ ಮರುತ್ತರ ನೀಡುತ್ತಿದ್ದರೆ.ಈ ನೀತಿ ಅವರ ವಿಧವಾ ವಿವಾಹ ನಡೆಸುವ ಸಮಾಜಿಕ ಕಳಿಕಳಿಯನ್ನು ಬಿಂಬಿಸುತ್ತದೆ.ಒಮ್ಮೆ ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಒಂದು ಸನ್ನಿವೇಶದಲ್ಲಿ ಅವರನ್ನು ಭೇಟಿ ಮಾಡಲು ಬಂದ ಜಿ.ಪಿ.ರಾಜರತ್ನಂ ಅವರನ್ನು ಮಾತನಾಡಿಸಿ "ಈಗೇನು ಬರೆಯುತ್ತಿದ್ದೀರಿ?" ಎಂದು ಕೇಳಿದರು.ಜಿ.ಪಿ.ರಾಜರತ್ನಂ"ವೇದಾಂತ ದೇಶಿಕರ ವೈರಾಗ್ಯ ಪಂಚಕವನ್ನು ಅರ್ಥ ಸಹಿತ ಸಿದ್ಧಗೊಳಿಸುತ್ತಿದ್ದೇನೆ"ಎಂದರು. ಕೂಡಲೆ ಡಿವಿಜಿಯವರ ಕಣ್ಣು ಮುಚ್ಚಿ, ಹನಿಗೂಡಿ ಕೈಗಳೆರಡು ಎದೆಯ ಮೇಲೆ ಒಂದುಗೂಡಿದವು. ಮೆಲ್ಲನೆ ಮಾತು ಹೊರಟಿತು."ವೇದಾಂತ ದೇಶಿಕರು ಮಹಾನುಭಾವರು, ವಿದ್ಯಾರಣ್ಯರ ವಿಷಯ ಇನ್ನೂ ಏನೇನೋ ಮಾಡಬೇಕೆಂದಿದ್ದೆ, ದೇಶಿಕರನ್ನು ಇನ್ನೂ ಅಧ್ಯಯನ ಮಾಡಬೇಕಾಗಿದೆ, ಆದರೆ ಆಗುತ್ತಿಲ್ಲ" ಎಂದು ನುಡಿದರು. ಈ ಸನ್ನಿವೇಶ ಅವರ ನಿಸ್ಸ್ವಾರ್ಥ ಜೀವನ, ಅಭ್ಯಾಸ ಮಾಡುವ ಆಸೆ, ಸಮಾಜಕ್ಕಾಗಿ ಹೋರಾಡಿ, ಜೀವನವನ್ನೆ ಮುಡಿಪಾಗಿರಿಸಿ ಎಲ್ಲರಲು ಒಂದಾಗಿ ಬಾಳಿ, ಕಡೆಯದಾಗಿ ೦೭-೧೦-೧೯೭೫ರಂದು ಮುಂಜಾನೆ ೫-೫೦ರ ಸಮಯಕ್ಕೆ ದೇಹವನ್ನು ತ್ಯಜಿಸಿ ಅಮರರಾದರು. The King is dead, Long live the King, ಎನ್ನುವಂತೆ ಕೊನೆಯ ಕನ್ನಡಿಗನ ಉಸಿರಿರುವರೆಗು ಡಿ.ವಿ.ಜಿಯವರ ನೆನಪು ಹಸಿರಾಗೆ ಇರುತ್ತದೆ.

ಹುಲ್ಲಾಗು ಬೆಟ್ಟದಡಿ,ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಲಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ

ಎಂದು ಸಾರಿ ಅದೆ ರೀತಿಯಾಗಿ ಬಾಳಿ, ಬದುಕಿ, ಇತರಿಗೆ ಆದರ್ಶ ಪ್ರಾಯವಾದ ಚೇತನ ಡಿ.ವಿ.ಜಿ ಕನ್ನಡಿಗರ ಮನದಲ್ಲಿ ಎಂದಿಗೂ ಚಿರಾಯು....

(ಮುಗಿಯಿತು)

No comments: